ರಾಜಸ್ಥಾನದ ಉದಯಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಟೈಲರ್ ಕನ್ನಯ್ಯ ಲಾಲ್ ಪ್ರಕರಣವನ್ನು ಕೇಂದ್ರ ಸರ್ಕಾರ, ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಇದರ ಮಧ್ಯೆ ಹಂತಕರ ಕುರಿತು ಒಂದೊಂದೇ ಶಾಕಿಂಗ್ ಸಂಗತಿಗಳು ಬಹಿರಂಗವಾಗುತ್ತಿವೆ.
ಮಹಮ್ಮದ್ ರಿಯಾಜ್ ಆಕ್ತಾರಿ ಮತ್ತು ಗೌಸ್ ಮಹಮ್ಮದ್ ಎಂಬ ಈ ಹಂತಕರು ಕನ್ನಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಬಳಿಕ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುವ ಪ್ಲಾನ್ ಮಾಡಿದ್ದರಾದರೂ ರಾಜ್ ಸಮಂದ್ ಬಳಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಅವರುಗಳ ವಿಚಾರಣೆ ವೇಳೆ ಈ ಹಂತಕರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿರುವುದು ತಿಳಿದುಬಂದಿದೆ.
ಹಂತಕರ ಪೈಕಿ ಒಬ್ಬನಾದ ಮಹಮ್ಮದ್ ರಿಯಾಜ್, ಉದಯ್ಪುರ ಮೂಲದ ರಿಯಾಸತ್ ಹುಸೇನ್ ಮತ್ತು ಅಬ್ದುಲ್ ರಜಾಕ್ ಎಂಬವರ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆ ದಾವತ್ ಈ ಇಸ್ಲಾಮಿ ಸೇರ್ಪಡೆಗೊಂಡಿದ್ದು 2013ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಎನ್ನಲಾಗಿದೆ. ಅಲ್ಲದೆ ಸೌದಿ ಅರೇಬಿಯಾಕ್ಕೆ ಎರಡು ಬಾರಿ ಬೇಟಿ ನೀಡಿದ್ದ ಈತ ನೇಪಾಳಕ್ಕೂ ಒಮ್ಮೆ ಹೋಗಿ ಬಂದಿದ್ದ ಎನ್ನಲಾಗಿದೆ.
ಕರಾಚಿ ಮೂಲದ ಸಲ್ಮಾನ್ ಬಾಯ್ ಹಾಗೂ ಅಬ್ದುಲ್ ಇಬ್ರಾಹಿಂ ಎಂಬವರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಇವರುಗಳು, ಕೆಲ ದಿನಗಳ ಹಿಂದೆ ಮೊಬೈಲ್ ಮೂಲಕ ಸದ್ಯದಲ್ಲೇ ನಾವು ದೊಡ್ಡ ಕಾರ್ಯ ಒಂದನ್ನು ಮಾಡಲಿದ್ದೇವೆ. ಇದರ ವಿಡಿಯೋವನ್ನು ಕಳುಹಿಸಿ ಕೊಡುತ್ತೇನೆ ಎಂಬ ಸಂದೇಶ ಕಳುಹಿಸಿದ್ದರು ಎಂದು ಹೇಳಲಾಗಿದೆ.