‘ಗಂಗಾ ಸ್ನಾನ – ತುಂಗಾ ಪಾನ’ ಎಂಬ ನಾಣ್ಣುಡಿಯಿದೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಕಾರಣಕ್ಕೆ ಯಾತ್ರೆ ಹೋಗುತ್ತಾರೆ. ಅಲ್ಲಿಗೆ ಹೋದ ಸಂದರ್ಭದಲ್ಲಿ ಗಂಗೆಯಲ್ಲಿ ಮಿಂದೇಳುವುದು ಸಹಜ ಸಂಗತಿ. ಆದರೆ ಇಲ್ಲೊಬ್ಬ 70 ವರ್ಷದ ವೃದ್ಧೆಯೊಬ್ಬರು ವಿಭಿನ್ನ ರೀತಿಯಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ.
ಹೌದು, ಇಂಥದೊಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹರಿದ್ವಾರಕ್ಕೆ ಬಂದಿದ್ದ ಈ ವೃದ್ಧೆ, ಸಾವಿರಾರು ಮಂದಿ ನೋಡುತ್ತಿದ್ದಂತೆಯೇ ಸೇತುವೆ ಮೇಲಿಂದ ಹಾರುವ ಮೂಲಕ ಅವರನ್ನು ದಂಗಾಗಿಸಿದ್ದಾರೆ. ನೀರಿಗೆ ಬಿದ್ದ ಬಳಿಕ ಆರಾಮಾಗಿ ಈಜಿಕೊಂಡು ವೃದ್ಧೆ ದಡ ಸೇರಿದ್ದಾರೆ.
ಹರಿದ್ವಾರದ ಹರ್ ಕಿ ಪೌರಿ ಘಾಟ್ ಬಳಿ ಇಂಥದೊಂದು ಘಟನೆ ನಡೆದಿದ್ದು, ಇದನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರಿಸಿಕೊಂಡವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ವೃದ್ಧೆ ಮಾಡಿದ ಸಾಹಸಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಜೊತೆಗೆ ಆಕೆಯ ಭಕ್ತಿಯನ್ನು ಕೊಂಡಾಡಿದ್ದಾರೆ. ಆದರೆ ಕೆಲವರು ಈ ಇಳಿವಯಸ್ಸಿನಲ್ಲಿ ವೃದ್ಧೆ ಇಂತಹ ಕಾರ್ಯ ಮಾಡಲು ಹೋಗಬಾರದಿತ್ತು. ಹೆಚ್ಚುಕಮ್ಮಿಯಾಗಿದ್ದರೆ ಗತಿಯೇನೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ.