ಮಂಗಳೂರು: ಉದಯಪುರದಲ್ಲಿ ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣವನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ದೇಶದಲ್ಲಿ ಮತ್ತೆ ಉಗ್ರರ ಚಟುವಟಿಕೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಟೈಲರ್ ಹತ್ಯೆ ವ್ಯವಸ್ಥಿತ ಸಂಚು. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಮಾಡಲಾಗಿತ್ತು. ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆತಂಕ ಮೂಡುತ್ತಿದೆ. ರಾಜಸ್ಥಾನ ಘಟನೆ ಹಿಂದೆ ವಿದೇಶಿ ಕೈವಾಡ ಅಡಗಿದೆ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನ ಸರ್ಕಾರದ ಪುಷ್ಠೀಕರಣ ನೀತಿಯೇ ಘಟನೆಗೆ ಕಾರಣ. ಇಂತಹ ಘಟನೆಗಳು ದೇಶದಲ್ಲಿ ನಡೆಯುತ್ತಿದ್ದರೂ ಕಾಂಗ್ರೆಸ್ ಮೌನವಾಗಿರುವುದೇಕೆ? ಉತ್ತರ ಪ್ರದೇಶದ ಯೋಗಿ ಸರ್ಕಾರ ಮಾದರಿ ಅಗತ್ಯವಿದೆ. ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಧಾನಿ ಮೋದಿ ಸರ್ಕಾರ ಇದನ್ನು ಸಹಿಸಲು ಸಾಧ್ಯವಿಲ್ಲ. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅಂತಹ ಕಠಿಣ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದರು.