ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಏಕನಾಥ ಶಿಂಧೆ ಬಣದ ಶಾಸಕರು ಗುವಾಹಟಿಯಿಂದ ಮುಂಬೈಗೆ ಆಗಮಿಸಲಿದ್ದಾರೆ.
ನಾಳೆ ವಿಶ್ವಾಸ ಮತಯಾಚನೆಯಲ್ಲಿ ಬಂಡಾಯ ಶಾಸಕರು ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರು ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಗಡುವು ನೀಡಿದ್ದಾರೆ. ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಅವರಿಗೆ ನಾಳೆ ಸಂಜೆ 5 ಗಂಟೆಗೆ ಸದನದ ಬಹುಮತ ಸಾಬೀತುಪಡಿಸುವಂತೆ ತಿಳಿಸಿದ್ದು, ಅಧಿವೇಶನವನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡುವಂತೆಯೂ ಸೂಚಿಸಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲಿರುವ ಸದನದ ಏಕೈಕ ಅಜೆಂಡಾ ವಿಶ್ವಾಸಮತ ಪರೀಕ್ಷೆಯಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಬಹುಮತ ಕಳೆದುಕೊಂಡಿರುವ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನವಾಗುವುದು ನಿಶ್ಚಿತವೆನ್ನಲಾಗಿದೆ.