ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಿಗೆ ಭಾರೀ ವಿಶೇಷ ಉಡುಗೊರೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿ ಪಾಲ್ಗೊಂಡಿರುವ ಜಗತ್ತಿನ ಪವರ್ ಫುಲ್ ದೇಶಗಳ ನಾಯಕರಿಗೆ ಪ್ರತ್ಯೇಕವಾಗಿ ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೊರೆಗಳನ್ನು ನೀಡಿದ್ದಾರೆ.
ಜರ್ಮನಿಯ ಛಾನ್ಸಲರ್ ಒಲಾಫ್ ಶೋಲ್ಝ್ ಅವರಿಗೆ ಮೋದಿ ಮೆಟಲ್ ಮರೋಡಿಯನ್ನು ಉಡುಗೊರೆ ನೀಡಿದ್ದಾರೆ. ಇದನ್ನು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕರಕುಶಲಕರ್ಮಿಗಳು ಹಿತ್ತಾಳೆ ಪಾತ್ರೆಯ ಮೇಲೆ ಕುಸುರಿ ಕಲೆಯನ್ನು ಚಿತ್ರಿಸಿದ್ದಾರೆ. ನಿಕಲ್ ಲೇಪಿತ ಪಾತ್ರೆ ಇದಾಗಿದ್ದು, ಇದರಲ್ಲಿ ಉತ್ತರ ಪ್ರದೇಶದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸಲಾಗಿದೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಉತ್ತರ ಪ್ರದೇಶದ ವಾರಣಾಸಿಯ ಗುಲಾಬಿ ಮೀನಾಕರಿ ಆಭರಣವನ್ನು ಗಿಫ್ಟ್ ಮಾಡಿದ್ದಾರೆ.
ಇನ್ನು ಯುಕೆಯ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪ್ಲಾಟಿನಂ ಪೇಂಟ್ ನ ಟೀ ಸೆಟ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಇದನ್ನು ಉತ್ತರ ಪ್ರದೇಶದ ಬುಲಂಧ್ ಶಹರ್ ನ ಕುಶಲಕರ್ಮಿಗಳು ತಯಾರಿಸಲಾಗಿದೆ. ಈ ವರ್ಷ ಯುಕೆ ರಾಣಿಯವರ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಜ್ಞಾಪಕಾರ್ಥಕವಾಗಿ ಪ್ಲಾಟಿನಂ ಲೋಹದ ಮೇಲೆ ಆಕರ್ಷಕವಾಗಿ ಪೇಂಟ್ ಮಾಡಲಾಗಿರುವ ಟೀ ಸೆಟ್ ಇದಾಗಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಅವರಿಗೆ ಪ್ರಧಾನಿ ಮೋದಿ ಯುಪಿಯ ಲಕ್ನೋದಲ್ಲಿ ಸಿದ್ಧಪಡಿಸಲಾಗಿದ್ದ ಜರ್ದೋಝಿ ಬಾಕ್ಸ್ ನಲ್ಲಿ ಒಂದು ಲೀಟರ್ ಬಾಟಲಿಗಳನ್ನು ಉಡುಗೊರೆ ನೀಡಿದರು. ಈ ಬಾಕ್ಸ್ ನ ಮೇಲಿನ ಖಾದಿ ರೇಷ್ಮೆ ಬಟ್ಟೆ ಮೇಲೆ ಕೈಯಿಂದ ಕುಸುರಿ ಕೆಲಸ ಮಾಡಲಾಗಿದ್ದು, ಫ್ರಾನ್ಸ್ ನ ರಾಷ್ಟ್ರ ಧ್ವಜದ ಬಣ್ಣಗಳನ್ನು ಹೊಂದಿದೆ. ಈ ಬಾಕ್ಸ್ ನಲ್ಲಿ ಮಿಟ್ಟಿ, ಜಾಸ್ಮಿನ್ ಆಯಿಲ್, ಅತ್ತರ್ ಶಾಮಮ, ಅತ್ತರ್ ಗುಲಾಬ್, ಎಕ್ಸಾಟಿಕ್ ಮಸ್ಕ್ ಮತ್ತು ಗರಂ ಮಸಾಲ ಇವೆ.
ಜಪಾನಿನ ಪ್ರಧಾನಿ ಫ್ಯುಮಿಯೋ ಕಿಶಿಡಾ ಅವರಿಗೆ ಉತ್ತರ ಪ್ರದೇಶದ ನಿಜಾಮಾಬಾದ್ ನಲ್ಲಿ ತಯಾರಿಸಲಾಗಿದ್ದ ಕಪ್ಪು ಮಡಕೆಗಳು ಮೋದಿ ಅವರಿಂದ ಉಡುಗೊರೆಯಾಗಿ ಸಿಕ್ಕಿವೆ. ಹೀಗೆ ವಿವಿಧ ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಉಡುಗೊರೆಗಳನ್ನು ನೀಡಿದ್ದಾರೆ.