alex Certify ಕಾರ್ಮಿಕರಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ

ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ ಎಂದು ಕಾರ್ಮಿಕ ಸಚಿವರು ಅರಬೈಲ್ ಶಿವರಾಮ್ ಹೆಬ್ಬಾರ್ ನುಡಿದರು.

ಅವರು ಇಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿವಮೊಗ್ಗದ ಸಂಸದರ ಅತ್ಯುತ್ಸಾಹದಿಂದಾಗಿ ಜಿಲ್ಲೆಯಲ್ಲಿ ಇಂದು ತ್ವರಿತವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರ ಕಾರ್ಮಿಕರ ಬದುಕನ್ನು ಹಸನು ಮಾಡಲು ಪಣ ತೊಟ್ಟು ಅನೇಕ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಂದು ಚಾಲನೆ ನೀಡಲಾದ ಉಚಿತ ಆರೋಗ್ಯ ತಪಾಸಣೆಯಲ್ಲಿ 21 ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಖಾಸಗಿಯಲ್ಲಿ ಮಾಡಿಸಿದರೆ ಒಬ್ಬರಿಗೆ ರೂ.12 ಸಾವಿರದವರೆಗೆ ವೆಚ್ಚ ತಗುಲುತ್ತದೆ. ಇಂತಹ ಪರೀಕ್ಷೆಯನ್ನು ಮೊದಲ ಹಂತದಲ್ಲಿ ಸುಮಾರು 30 ಸಾವಿರ ಕಾರ್ಮಿಕರಿಗೆ ಮಾಡಲಾಗುತ್ತಿದೆ. ಕಾರ್ಮಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.

ರಾಜ್ಯದಲ್ಲಿ 32 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. 70 ಲಕ್ಷ ಅಸಂಘಟಿತ ಕಾರ್ಮಿಕರು ಇ-ಶ್ರಮ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕಾನೂನುಗಳನ್ನು ಸುಗಮಗೊಳಿಸಿದೆ. ಇಂದು ಶಿವಮೊಗ್ಗ ತಾಲ್ಲೂಕಿನ ಸಿದ್ಲೀಪುರದಲ್ಲಿ ಕಟ್ಟಡ ಕಾರ್ಮಿಕರ ವಸತಿ ಸಮುಚ್ಚಯ ಕಾಮಗಾರಿಗೆ ಗುದ್ದಲಿಪೂಜೆ ಆಗಿದ್ದು, ಇದಕ್ಕೆ ಸಂಸದರು ಹೆಚ್ಚುವರಿಯಾಗಿ ರೂ.8 ರಿಂದ 10 ಕೋಟಿ ಕೇಳಿದ್ದಾರೆ ಜೊತೆಗೆ ಮತ್ತೆ 30 ಸಾವಿರ ಜನರಿಗೆ ಉಚಿತ ಆರೋಗ್ಯ ತಪಾಸಣೆಗೆ ಟೆಂಡರ್ ಕರೆಯುವಂತೆ ಕೋರಿದ್ದು ಇದಕ್ಕೆ ನನ್ನ ಒಪ್ಪಿಗೆ ಇದೆ. ಸರ್ಕಾರ ಸದಾ ಕಾರ್ಮಿಕರ ಜೊತೆ ಇದೆ ಎಂದು ತಿಳಿಸಿದರು.

ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಇಲಾಖೆ ಒಟ್ಟು 750 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ(500 ಕೆಎಎಸ್+250ಐಎಎಸ್) ಉಚಿತ ತರಬೇತಿ ನೀಡುವ ಯೋಜನೆ, ಎಸ್‍ಎಸ್‍ಎಲ್‍ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 15 ಸಾವಿರ ಗೌರವಧನ ಮತ್ತು 10 ಸಾವಿರ ಬೋನಸ್ ಒಟ್ಟು 25 ಸಾವಿರ ಘೋಷಿಸಿದೆ. 2591 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಶ್ಲಾಘನೀಯವಾಗಿದ್ದು ಈ ಸಾಲಿನಲ್ಲಿ ಅವರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಸುಮಾರು 37 ಲಕ್ಷ ವೆಚ್ಚದಲ್ಲಿ 18 ತಿಂಗಳ ಪೈಲಟ್ ತರಬೇತಿಯನ್ನು ಕಾರ್ಮಿಕರ ಮಕ್ಕಳಿಗೂ ನೀಡುವ ಸಲುವಾಗಿ 31 ಜಿಲ್ಲೆಗಳಿಂದ ಒಟ್ಟು 31 ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಒಟ್ಟಾರೆ ಕಾರ್ಮಿಕರ ಮತ್ತು ಅವರ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಲಾಖೆಯಲ್ಲಿ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ಹಿತ ಕಾಯಲು ಕರ್ನಾಟಕದ ಕಾರ್ಮಿಕ ಇಲಾಖೆ ಚಾರಿತ್ರಿಕ ಕೆಲಸ ಮಾಡಿದೆ ಎಂದು ಸ್ಮರಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...