ಅಮೆರಿಕಾದಲ್ಲಿ ಗರ್ಭಪಾತ ವಿಚಾರ ಸದ್ಯ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಅಲ್ಲಿನ ಸುಪ್ರೀಂ ಕೋರ್ಟ್ ನಾಗರಿಕರಿಗೆ ಗರ್ಭಪಾತದ ಹಕ್ಕನ್ನು ಖಾತರಿಪಡಿಸುವ ತೀರ್ಪನ್ನು ರದ್ದುಗೊಳಿಸಿದೆ. ಇದೇ ವೇಳೆ ಗರ್ಭಪಾತಕ್ಕಾಗಿ ಮತ್ತೊಂದು ರಾಜ್ಯಕ್ಕೆ ಭೇಟಿ ನೀಡಬೇಕಾದ ತನ್ನ ಉದ್ಯೋಗಿಗಳಿಗೆ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಸ್ಪೋರ್ಟಿಂಗ್ ಗೂಡ್ಸ್ ಕಂಪನಿ ಪ್ರಕಟಿಸಿದೆ.
ಸುಪ್ರಿಂ ಕೋರ್ಟ್ ತೀರ್ಪು ಯುಎಸ್ ನಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ತೀರ್ಪಿನ ಕುರಿತು ಬಿಸಿ ಚರ್ಚೆಯ ನಡುವೆಯೇ ಗರ್ಭಪಾತದ ಅಗತ್ಯವಿರುವ ಉದ್ಯೋಗಿಗಳಿಗೆ ಸಹಾಯ ಮಾಡಲು ಈ ಒಂದು ಕಂಪನಿಯ ಘೋಷಣೆ ವೈರಲ್ ಆಗಿದೆ.
ಡಿಕ್ಸ್ ಸ್ಪೋರ್ಟಿಂಗ್ ಗೂಡ್ಸ್ನ ಸಿಇಒ ಲಾರೆಂಟ್ ಹೋಬಾರ್ಟ್ ಲಿಂಕ್ಡ್ಇನ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಈ ತೀಪಿರ್ನ ಕುರಿತು ಪ್ರತಿ ರಾಜ್ಯವು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲವಾದರೂ ನಮ್ಮ ಟೀಮ್ ಮೇಟ್ಸ್ಗೆ ಪ್ರಯೋಜನ ಕಲ್ಪಿಸಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ಗರ್ಭಪಾತಕ್ಕೆ ತಮ್ಮ ಪ್ರವೇಶವನ್ನು ನಿರ್ಬಂಧಿಸುವ ರಾಜ್ಯದಲ್ಲಿ ವಾಸಿಸುತ್ತಿದ್ದರೆ, ಗರ್ಭಪಾತ ಕಾನೂನು ಬದ್ಧವಾಗಿ ಲಭ್ಯವಿರುವ ಹತ್ತಿರದ ಸ್ಥಳಕ್ಕೆ ಪ್ರಯಾಣ ವೆಚ್ಚಕ್ಕಾಗಿ ಕಂಪನಿಯು 3.13 ಲಕ್ಷ ರೂ.ವರೆಗೆ ಮರುಪಾವತಿಯನ್ನು ನೀಡುತ್ತದೆ ಎಂದು ಹೋಬಾರ್ಟ್ ಘೋಷಿಸಿದರು. ಕಂಪನಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.