ಚಂಡಿಗಢ: ಪಂಜಾಬ್ ನಲ್ಲಿ ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್ ಯೋಜನೆ ಜಾರಿ ಬಗ್ಗೆ ಆಮ್ ಆದ್ಮಿ ಪಕ್ಷ ಪಕ್ಷದ ಸರ್ಕಾರ ಘೋಷಣೆ ಮಾಡಿದೆ. ಮೊದಲ ಬಜೆಟ್ ನಲ್ಲಿ ಚುನಾವಣೆ ಭರವಸೆ ಈಡೇರಿಕೆಗೆ ಮುಂದಾಗಿದ್ದು, ತಿಂಗಳಿಗೆ ಒಂದು ಮನೆಗೆ 300 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು.
ಜುಲೈ 1 ರಿಂದ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಅದೇ ರೀತಿ ದೆಹಲಿಯಲ್ಲಿ ಯಶಸ್ವಿಯಾಗಿರುವ ಮೊಹಲ್ಲಾ ಕ್ಲಿನಿಕ್ ಗಳನ್ನು ಪಂಜಾಬ್ ನಲ್ಲಿಯು ಆರಂಭಿಸಲಾಗುವುದು. ಗೃಹ ಬಳಕೆಗೆ ಮಾತ್ರ 300 ಯುನಿಟ್ ಉಚಿತ ವಿದ್ಯುತ್ ಸೀಮಿತವಾಗಿದ್ದು, ರೈತರಿಗೆ ಹಿಂದಿನಂತೆಯೇ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು.
ದೆಹಲಿ ಮಾದರಿಯಲ್ಲಿ 100 ಸರ್ಕಾರಿ ಶಾಲೆಗಳ ಅಭಿವೃದ್ಧಿ, 500 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಆರಂಭಿಸುವ ಜೊತೆಗೆ 26,000 ಸರ್ಕಾರಿ ನೌಕರರ ನೇಮಕ, 16 ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವುದಾಗಿ ಹಣಕಾಸು ಸಚಿವರ ಹರ್ ಪಾಲ್ ಸಿಂಗ್ ಚೀಮಾ ಮಂಡಿಸಿದ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ.