ಪ್ರೇಮಕ್ಕೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಎನ್ನುವವರ ಸಂಖ್ಯೆಯೇ ಅಧಿಕ. ಹಾಗಂತ ಹುಡುಗ-ಹುಡುಗಿ ಪರಸ್ಪರರ ಹಿನ್ನೆಲೆಯನ್ನು ಅರಿಯದೇ ಪ್ರೇಮದ ಪಾಶದಲ್ಲಿ ಬಿದ್ದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.
ಇಂತಹ ಸನ್ನಿವೇಶಗಳನ್ನು ನಾವು ನಿಜ ಜೀವನದಲ್ಲಿ, ಧಾರಾವಾಹಿಗಳು ಮತ್ತು ಸಿನೆಮಾದಲ್ಲಿ ಸಾಕಷ್ಟು ನೋಡಿದ್ದೇವೆ. ಆದರೆ, ಇಲ್ಲೊಂದು ಪ್ರಕರಣ ಮಾತ್ರ ವಿಚಿತ್ರವಾಗಿದೆ.
ಮಧ್ಯಪ್ರದೇಶದ ರಾಜಘರ್ ಗೆ ಸೇರಿದ ಎರಡು ಗ್ರಾಮಗಳ ಯುವಕ-ಯುವತಿ ಕಳೆದ 5 ತಿಂಗಳ ಹಿಂದೆ ಮದುವೆ ಸಮಾರಂಭವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಭೇಟಿ ಸ್ವಲ್ಪ ಸಲುಗೆಗೆ ಹೋಗಿ ಇಬ್ಬರೂ ತಮ್ಮ ತಮ್ಮ ಮೊಬೈಲ್ ನಂಬರ್ ಗಳನ್ನು ಪಡೆದುಕೊಂಡಿದ್ದಾರೆ.
ಹೀಗೆ ಐದು ತಿಂಗಳ ಕಾಲ ಇಬ್ಬರೂ ಫೋನ್ ನಲ್ಲಿ ಮಾತನಾಡುತ್ತಾ ಆ ಮಾತು ಪ್ರೇಮಾಂಕುರಕ್ಕೆ ತಿರುಗಿದೆ. ಇಬ್ಬರೂ ಇತ್ತೀಚೆಗೆ ದೇವಸ್ಥಾನದಲ್ಲಿ ಭೇಟಿಯಾಗಲು ನಿರ್ಧರಿಸಿದರು. ರಸೂಲ್ಪುರ ಗ್ರಾಮದ ಯುವಕ, ಯುವತಿಯನ್ನು ಭೇಟಿಯಾಗಲು ಆಕೆಯ ಊರು ರೋಶಿಯಾಗೆ ಬಂದ. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು ದೇವಸ್ಥಾನದ ಬಳಿ ಯುವಕ ಮತ್ತು ಆತನ ಸ್ನೇಹಿತನನ್ನು ಹಿಡಿದು ಕಟ್ಟಿ ಹಾಕಿ ತೀವ್ರ ರೀತಿಯಲ್ಲಿ ಥಳಿಸಿದ್ದಾರೆ.
ಅಂದ ಹಾಗೆ ಯುವತಿಯ ಸಂಬಂಧಿಕರು ಇವರಿಬ್ಬರ ಕುಟುಂಬ ಇತಿಹಾಸವನ್ನು ಪರಿಶೀಲನೆ ನಡೆಸಿದಾಗ ಯುವತಿ ಮತ್ತು ಯುವಕ ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ವರಸೆಯಲ್ಲಿ ಸಹೋದರ-ಸಹೋದರಿಯಾಗಿದ್ದಾರೆ ಎಂದು ತಿಳಿದು ಬೇಸ್ತು ಬಿದ್ದಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಯುವತಿಯ ಸಂಬಂಧಿಕರು ಯುವಕ ಮತ್ತು ಆತನ ಸ್ನೇಹಿತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.