ಬಹುಶಃ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಉದ್ಯಮಿಗಳ ಸಾಲಿನಲ್ಲಿ ಆನಂದ್ ಮಹೀಂದ್ರಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದಿಲ್ಲಾ ಒಂದು ಪ್ರೇರಣಾದಾಯಕ ವಿಚಾರಗಳನ್ನು ಅಥವಾ ಪ್ರಕೃತಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರಿಗೆ ಮುದ ನೀಡುವಂತೆ ಮಾಡುತ್ತಾರೆ.
ಇದೀಗ ಅಭಿಷೇಕ್ ದುಬೆ ಎಂಬುವರು ಹಿಮಾಚಲ ಪ್ರದೇಶದ ಪುಟ್ಟ ಬಾಲೆ ಪ್ರಕೃತಿಯ ಮಡಿಲಲ್ಲಿ ಕುಳಿತು ತನ್ನ ಓದಿನಲ್ಲಿ ತಲ್ಲೀನಳಾಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಇದೇ ಫೋಟೋವನ್ನು ಹಂಚಿಕೊಂಡಿರುವ ಆನಂದ್, `ಇದೊಂದು ಸುಂದರವಾದ ಫೋಟೋ ಅಭಿಷೇಕ್, ಈಕೆ ಸೋಮವಾರದ ನನ್ನ ಪ್ರೇರಣೆಯಾಗಿದ್ದಾಳೆ’ ಎಂದು ಗುಣಗಾನ ಮಾಡಿದ್ದಾರೆ.
ಅಭಿಷೇಕ್ ಅವರು ಹಿಮಾಚಲ ಪ್ರದೇಶದ ಪ್ರವಾಸದ ವೇಳೆ ಸಾಟೌನ್ ಪ್ರದೇಶದಲ್ಲಿನ ಸುಂದರ, ರಮಣೀಯ ಪ್ರಕೃತಿಯ ಸೌಂದರ್ಯದ ಮಧ್ಯೆ ಬಾಲಕಿ ಪುಸ್ತಕವನ್ನು ತೆಗೆದು ಓದುತ್ತಾ ಕುಳಿತ್ತಿದ್ದಾಳೆ. ಈ ಸುಂದರ ದೃಶ್ಯವನ್ನು ಅಭಿಷೇಕ್ ಕ್ಲಿಕ್ಕಿಸಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಇದನ್ನು ನೋಡಿದ ಆನಂದ್ ಮಹೀಂದ್ರಾ ಫೋಟೋವನ್ನು ಹಂಚಿಕೊಂಡು ಅದಕ್ಕೊಂದು ಅತ್ಯುತ್ತಮ ಶೀರ್ಷಿಕೆ ಹಾಕಿರುವುದು ನೆಟ್ಟಿಗರ ಮನ ಗೆದ್ದಿದೆ. ಮಹೀಂದ್ರಾ ಅವರಂತೆಯೇ ಇತರೆ ನೆಟ್ಟಿಗರಿಗೂ ಈ ಫೋಟೋ ಪ್ರೇರಕದಾಯಕವಾಗಿದೆ. ದಯಮಾಡಿ ಈ ಬಾಲೆಗೆ ತೊಂದರೆ ಕೊಡಬೇಡಿ. ಓದಿಕೊಳ್ಳಲು ನಗರದ ಮನೆಗಳಿಗಿಂತ ಅತ್ಯುತ್ತಮ ಜಾಗವನ್ನು ಆಕೆ ಹುಡುಕಿಕೊಂಡಿದ್ದಾಳೆ ಎಂದು ನೆಟ್ಟಿಗರೊಬ್ಬರು ಉದ್ಘಾರ ತೆಗೆದಿದ್ದಾರೆ.