ಬೆಂಗಳೂರು: ಹಲಸೂರು ಗೇಟ್ ಬಳಿ ತಪಾಸಣೆ ನೆಪದಲ್ಲಿ ಹೊರ ರಾಜ್ಯದ ವಾಹನಗಳನ್ನು ನಿಲ್ಲಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎ ಎಸ್ ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಇಬ್ಬರನ್ನು ಅಮಾನತು ಮಾಡಲಾಗಿದೆ.
ಜೂನ್ 10ರಂದು ದೇವಾಂಗ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಣೆಗೆ ನೇಮಕಗೊಂಡಿದ್ದ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಗಳು ಪರಿಶೀಲನೆಗಾಗಿ ಕಾರೊಂದನ್ನು ನಿಲ್ಲಿಸಿ, ಕಾರಿನಲ್ಲಿ ವಾಷ್ ಬೇಸಿನ್ ಇದೆ ಎಂಬ ಕಾರಣಕ್ಕೆ ಕಾರನ್ನು ಸೀಜ್ ಮಾಡುವುದಾಗಿ ಬೆದರಿಸಿ 20 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ನಲ್ಲಿ ಪಾವತಿಸಬೇಕು ಎಂದಿದ್ದರು.
ಇದರಿಂದ ಹೆದರಿದ ಕಾರು ಮಾಲೀಕ ಸಂತೋಷ್, 2500 ರೂ. ನೀಡಿದ್ದಾರೆ. ಇದಕ್ಕೆ ಪೊಲೀಸ್ ಸಿಬ್ಬಂದಿ ಯಾವುದೇ ರಸೀದಿಯನ್ನು ನೀಡಿರಲಿಲ್ಲ. ಈ ಬಗ್ಗೆ ಸಂತೋಷ್ ಹಿರಿಯ ಅಧಿಕಾರಿಗಳಿಗೆ ಮೇಲ್ ಮೂಲಕ ದೂರು ನೀಡಿದ್ದರು. ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸಿಬ್ಬಂದಿ ಬಾಡಿವೋರ್ನ್ ಕ್ಯಾಮರಾ ಧರಿಸದೇ ಕಾರ್ಯನಿರ್ವಹಿಸುತ್ತಿರುವುದು ಹಾಗೂ 2500 ರೂ. ಅಕ್ರಮವಾಗಿ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎ ಎಸ್ ಐ ಮಹೇಶ್ ಹಾಗೂ ಹೆಚ್ ಸಿ ಗಂಗಾಧರಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.