ಭಾರತದ ಪರ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಂಜಾಬ್ ಮೂಲದ ಸರಬ್ಜಿತ್ ಸಿಂಗ್ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದರು. ತನ್ನ ಸಹೋದರನ ಬಿಡುಗಡೆಗಾಗಿ ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ಕಡೆ ಕ್ಷಣದವರೆಗೂ ಹೋರಾಡಿದ್ದರು. ಅಲ್ಲದೆ ಸರಬ್ಜಿತ್ ಅಮಾಯಕ ಎಂಬ ಸಂಗತಿಯನ್ನು ಮನದಟ್ಟು ಮಾಡಿಸಿದರೂ ಸಹ ಪಾಪಿ ಪಾಕಿಸ್ತಾನ ಸರಬ್ಜಿತ್ ಸಿಂಗ್ ಬಿಡುಗಡೆಗೆ ಒಪ್ಪಿರಲಿಲ್ಲ.
ಭಾರತ ಸರ್ಕಾರ ಸಹ ಸರಬ್ಜಿತ್ ಸಿಂಗ್ ಬಿಡುಗಡೆಗೆ ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ನೀಡಿರಲಿಲ್ಲ. ಪಾಕಿಸ್ತಾನ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸರಬ್ಜಿತ್ ಸಿಂಗ್ ಜೈಲಿನಲ್ಲಿದ್ದ ವೇಳೆ ಸಹ ಕೈದಿಗಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದರು. ಸರಬ್ಜಿತ್ ಸಿಂಗ್ ಜೀವನ ಆಧಾರಿತ ಚಿತ್ರ ‘ಸರಬ್ಜಿತ್’ 2016 ರಲ್ಲಿ ಬಿಡುಗಡೆಯಾಗಿದ್ದು ಇದರಲ್ಲಿ ಸರಬ್ಜಿತ್ ಪಾತ್ರವನ್ನು ರಣದೀಪ್ ಹೂಡ ಮಾಡಿದ್ದರೆ, ದಲ್ಬೀರ್ ಕೌರ್ ಪಾತ್ರವನ್ನು ಐಶ್ವರ್ಯ ರೈ ಬಚ್ಚನ್ ಮಾಡಿದ್ದರು.
ಸಿನಿಮಾ ಚಿತ್ರೀಕರಣದ ವೇಳೆ ರಣದೀಪ್ ಹೂಡಾ ಸರಬ್ಜಿತ್ ಸಿಂಗ್ ಕುಟುಂಬದ ಜೊತೆ ಆತ್ಮೀಯ ಬಂಧವನ್ನು ಹೊಂದಿದ್ದರು. ಅದರಲ್ಲೂ ದಲ್ಬೀರ್ ಕೌರ್ ಅವರನ್ನು ರಣದೀಪ್ ಹೂಡ ಸಹೋದರಿಯಂತೆ ಕಾಣುತ್ತಿದ್ದರು. ಈ ವೇಳೆ ದಲ್ಬೀರ್ ಕೌರ್ ತಾವು ಸಾವನ್ನಪ್ಪಿದ ವೇಳೆ ಅಂತ್ಯಕ್ರಿಯೆಯನ್ನು ಸಹೋದರನ ಸ್ಥಾನದಲ್ಲಿ ನಿಂತು ನೆರವೇರಿಸುವಂತೆ ರಣದೀಪ್ ಅವರನ್ನು ಕೋರಿದ್ದರಂತೆ. ಭಾನುವಾರದಂದು ದಲ್ಬೀರ್ ಸಾವನ್ನಪ್ಪಿದ್ದು, ವಿಷಯ ತಿಳಿದು ಸೋಮವಾರ ಪಂಜಾಬಿಗೆ ಆಗಮಿಸಿದ ರಣದೀಪ್ ಹೂಡಾ, ದಲ್ಬೀರ್ ಕೌರ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.