ಬೆಳಗಾವಿ: ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಿಡಿಕಾರಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಹಾರಾಷ್ಟ್ರದಲ್ಲಿರುವುದು ಮೂರಾಬಟ್ಟೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್ ಸಿ ಪಿ, ಕಾಂಗ್ರೆಸ್, ಶಿವಸೇನೆ ಮೂರು ಪಕ್ಷ ಸೇರಿ ಮೂರಾಬಟ್ಟೆ ಸರ್ಕಾರ ರಚನೆ ಮಾಡಿವೆ. ಕಾಂಗ್ರೆಸ್ ಗೂ ಶಿವಸೇನೆಗೂ ಯಾವತ್ತೂ ಹೊಂದಾಣಿಕೆಯಾಗಲ್ಲ. ನೀರಿಗೆ ಎಣ್ಣೆ ಸೇರಿಸಿದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ
ಮುಂಬೈನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಬಾಳಾಸಾಹೇಬ್ ಠಾಕ್ರೆ ಶಿವಸೇನೆ ಪಕ್ಷವನ್ನು ಕಟ್ಟಿದರು. ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರು. ತತ್ವ ಸಿದ್ಧಾಂತವೇ ಇಲ್ಲದ ಪಕ್ಷದ ಜತೆ ಕೈ ಜೋಡಿಸಿ ಸರ್ಕಾರ ಮಾಡಿದ್ದು, ಮಹಾ ಅಪರಾಧ ಎಂದು ವಾಗ್ದಾಳಿ ನಡೆಸಿದರು.
ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ತತ್ವ ಸಿದ್ಧಾಂತವಿಲ್ಲದ ಪಕ್ಷ, ಸರ್ಕಾರದ ವಿರುದ್ಧ ಶಾಸಕರೇ ಬಂಡಾಯವೆದ್ದಿದ್ದಾರೆ. ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಷ ಕೂಡ ಬಲಿಷ್ಠವಾಗುತ್ತಿದೆ ಎಂದು ಹೇಳಿದರು.