ಪೆಟ್ರೋಲ್ ಬಂಕ್ ನ ಡೀಸೆಲ್ ಟ್ಯಾಂಕ್ ನೊಳಗೆ ಮಳೆನೀರು ಸೇರಿಕೊಂಡಿದ್ದು, ಇದನ್ನು ಅರಿಯದೆ ತಮ್ಮ ವಾಹನಗಳಿಗೆ ಡೀಸೆಲ್ ಹಾಕಿಸಿಕೊಂಡ ಸವಾರರು ಈಗ ಪರದಾಡುತ್ತಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರ ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಚಂಡಿಯಾ ಗ್ರಾಮದಲ್ಲಿರುವ ಪೆಟ್ರೋಲ್ ಬಂಕಿನ ಡೀಸೆಲ್ ಟ್ಯಾಂಕಿನೊಳಗೆ ಮಳೆನೀರು ಸೇರಿಕೊಂಡಿದೆ.
ಇದು ಬಂಕ್ ಸಿಬ್ಬಂದಿಯ ಗಮನಕ್ಕೆ ಬಂದಿಲ್ಲ. ಹೀಗಾಗಿ ಡೀಸೆಲ್ ಹಾಕಿಸಿಕೊಳ್ಳಲು ಬಂದ ವಾಹನಗಳಿಗೆ ಇದನ್ನೇ ತುಂಬಿಸಿದ್ದಾರೆ. ಆದರೆ ವಾಹನಗಳು ತೊಂದರೆ ಕೊಡಲು ಆರಂಭಿಸಿದಾಗ ಸವಾರರು ಪರೀಕ್ಷಿಸಿದ ವೇಳೆ ನೀರು ಇರುವುದು ಗೊತ್ತಾಗಿದೆ.
ಬಳಿಕ ವಾಹನ ಸವಾರರು ಬಂಕ್ ಬಳಿ ಬಂದು ಗಲಾಟೆ ಮಾಡಿದ್ದು, ಡೀಸೆಲ್ ಟ್ಯಾಂಕ್ ತೆರೆದು ನೋಡಿದ ವೇಳೆ ಮಳೆನೀರು ತುಂಬಿರುವುದು ಗೊತ್ತಾಗಿದೆ. ಇದೀಗ ಹಾಳಾಗಿರುವ ತಮ್ಮ ವಾಹನಗಳನ್ನು ಸರಿ ಮಾಡಿಸಿಕೊಳ್ಳುವ ಅನಿವಾರ್ಯತೆ ಸವಾರರಿಗೆ ಬಂದಿದೆ.