ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಡೆಪ್ಯೂಟಿ ಸ್ಪೀಕರ್ ಅವರಿಗೆ ಮನವಿ ಮಾಡಿರುವ ಮಧ್ಯೆ ಭಿನ್ನಮತೀಯರ ನಾಯಕ ಏಕನಾಥ್ ಶಿಂಧೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಉಭಯ ನಾಯಕರು ಗುಜರಾತಿನ ವಡೋದರದಲ್ಲಿ ಭೇಟಿಯಾಗಿದ್ದರು ಎನ್ನಲಾಗಿದ್ದು, ಮುಂದಿನ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಸ್ಸಾಂನ ಗುವಾಹಟಿಯಲ್ಲಿದ್ದ ಏಕನಾಥ್ ಶಿಂಧೆ, ಖಾಸಗಿ ಚಾರ್ಟೆಡ್ ಫ್ಲೈಟ್ ನಲ್ಲಿ ವಡೋದರಾಕ್ಕೆ ಬಂದಿದ್ದರೆ, ದೇವೇಂದ್ರ ಫಡ್ನವಿಸ್ ಮುಂಬೈನಿಂದ ಆಗಮಿಸಿದ್ದರೆನ್ನಲಾಗಿದೆ.
ಏಕನಾಥ್ ಶಿಂಧೆ ಬಣದಲ್ಲಿ 40ಕ್ಕೂ ಅಧಿಕ ಶಾಸಕರಿದ್ದು, ಈ ಹಿನ್ನೆಲೆಯಲ್ಲಿ ತಮ್ಮದೇ ನಿಜವಾದ ಶಿವಸೇನೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ತಮ್ಮ ಬಣಕ್ಕೆ ಶಿವಸೇನೆ ಬಾಳಾ ಸಾಹೇಬ್ ಎಂದು ಹೆಸರಿಸಿಕೊಂಡಿದ್ದರೆ ಅತ್ತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.