ಇದು ದುಬಾರಿ ದುನಿಯ. ಎಲ್ಲೆಲ್ಲೂ ಬೆಲೆ ಹೆಚ್ಚಳದ ಕಾವು ತಟ್ಟುತ್ತಿದೆ. ಅಂದಹಾಗೆ, 990 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರತದಲ್ಲೇ ಅತಿ ಉದ್ದವಾದ ಮೇಲ್ಸೇತುವೆ ಎನಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಟೋಲ್ ದರ ಜುಲೈ 1ರಿಂದ ದುಬಾರಿಯಾಗುತ್ತಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ 9.98- ಕಿಮೀ ಉದ್ದದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಅನ್ನು ಬಳಸುವುದಕ್ಕೆ ವಾಹನ ಸವಾರರು ಹೆಚ್ಚಿನ ಹಣ ಪಾವತಿಸಲು ಸಿದ್ಧರಾಗಬೇಕು.
ಇ- ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನ ಸವಾರರು ಕ್ರಮವಾಗಿ ರೂ. 20, ರೂ. 30 ಮತ್ತು ರೂ. 625 ಬದಲು ರೂ.25 (ಒಂದು ಬಾರಿ ಪ್ರಯಾಣ), ರೂ. 35 (ಒಂದು ದಿನದಲ್ಲಿ ಬಹು ಪ್ರಯಾಣ) ಮತ್ತು ರೂ. 720 (ಮಾಸಿಕ ಪಾಸ್) ಪಾವತಿಸಬೇಕಾಗುತ್ತದೆ.
ಕಾರು/ಜೀಪ್/ವ್ಯಾನ್ ಚಾಲಕರು ಇನ್ನು ಮುಂದೆ ರೂ. 60 (ಏಕ ಪ್ರಯಾಣ), ರೂ. 90 (ಒಂದು ದಿನದಲ್ಲಿ ಬಹು ಪ್ರಯಾಣ) ಮತ್ತು ರೂ. 1,795 (ಮಾಸಿಕ ಪಾಸ್) ಪಾವತಿಸಬೇಕಾಗುತ್ತದೆ.
ಲಘು ವಾಣಿಜ್ಯ ವಾಹನಗಳಿಗೆ ರೂ. 85 (ಏಕ ಪ್ರಯಾಣ), ರೂ. 125 (ಒಂದು ದಿನದಲ್ಲಿ ಬಹು ಪ್ರಯಾಣ) ಮತ್ತು ರೂ. 2,515 (ಮಾಸಿಕ ಪಾಸ್), ಟ್ರಕ್/ಬಸ್‌ಗೆ ರೂ. 170 (ಏಕ ಪ್ರಯಾಣ), ರೂ. 250 (ಒಂದು ದಿನದಲ್ಲಿ ಬಹು ಪ್ರಯಾಣ) ಮತ್ತು ರೂ. 5,030 (ಮಾಸಿಕ ಪಾಸ್) ನಿಗದಿಯಾಗಿದೆ.
ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಬಿಇಟಿಪಿಎಲ್) ಪ್ರಕಾರ ಎರಡು ವರ್ಷಗಳಲ್ಲಿ ಟೋಲ್‌ನಲ್ಲಿ ಇದು ಮೊದಲ ಬಾರಿಗೆ ಏರಿಕೆಯಾಗಿದೆ. ಕಳೆದ ವರ್ಷ, ದ್ವಿಚಕ್ರ ವಾಹನಗಳಿಗೆ (ಏಕ ಮತ್ತು ಬಹು ಪ್ರಯಾಣಕ್ಕೆ) ಟೋಲ್‌ನಲ್ಲಿ ಯಾವುದೇ ಹೆಚ್ಚಳ ಮಾಡಿರಲಿಲ್ಲ.
2034 ರವರೆಗೆ ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ವರ್ಷ ಬಳಕೆದಾರರ ಶುಲ್ಕವನ್ನು ಪರಿಷ್ಕರಿಸಬಹುದು. ಇತ್ತೀಚಿನ ಹೆಚ್ಚಳವು ಮಾರ್ಚ್ 31, 2022 ರಂತೆ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿದ್ದು ಇದು 2023ರ ಜೂನ್‌ವರೆಗೆ ಜಾರಿಯಲ್ಲಿರುತ್ತದೆ.