ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು ಎರಡು ಡಜನ್ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಮೂರು ತಿಂಗಳ ಪಿಜಿ ಕೋರ್ಸ್ ಕಳೆದ ಬಳಿಕ ತಾವು ಡಿಗ್ರಿಯನ್ನೇ ಪೂರೈಸಿಲ್ಲ ಎಂಬ ಕಹಿ ಸತ್ಯ ಗೊತ್ತಾಗಿದೆ.
ಪಿಜಿ ಓದುತ್ತಿರುವ 21ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಈಗ ಶಾಕ್ಗೆ ಒಳಗಾಗಿದ್ದು, ವಿಶ್ವವಿದ್ಯಾಲಯದ ತಾಂತ್ರಿಕ ದೋಷದಿಂದ ಶೈಕ್ಷಣಿಕವಾಗಿ ಅತಂತ್ರರಾಗಿದ್ದಾರೆ.
ಕೆಲವು ವಿದ್ಯಾರ್ಥಿಗಳು ತಮ್ಮ ಯುಜಿ ಕೋರ್ಸ್ಗಳನ್ನು ಡಿಸ್ಟಿಂಕ್ಷನ್ನಲ್ಲಿ ತೆರವುಗೊಳಿಸಿದ್ದರು. ಹಾಗೆಂದು ವಿಶ್ವವಿದ್ಯಾಲಯವೇ ಫಲಿತಾಂಶ ನೀಡಿತ್ತು. ಆ ಫಲಿತಾಂಶದ ಆಧಾರದಲ್ಲಿ ಎಲ್ಲರೂ ಸ್ನಾತಕೋತ್ತರ ಕೋರ್ಸ್ಗೆ ಪ್ರವೇಶ ಪಡೆದಿದ್ದರು.
ಆದರೆ, ಪಿಜಿ ಪ್ರವೇಶ ಅನುಮೋದನೆ ಸಮಯದಲ್ಲಿ ಅವರೆಲ್ಲ ಅನುತ್ತೀರ್ಣ ಎಂಬ ಸಂಗತಿ ಗೊತ್ತಾಗಿದ್ದು, ಅವರ ಪಿಜಿ ಪ್ರವೇಶ ನಿರಾಕರಿಸಲಾಗಿದೆ.
ಆತಂಕಗೊಂಡ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ನೀಡಿದ ಎಲ್ಲಾ ದಾಖಲೆ, ಪ್ರಮಾಣಪತ್ರಗಳೊಂದಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ಸೆಮಿಸ್ಟರ್ ಯುಜಿ ಪರೀಕ್ಷೆಯ ಫಲಿತಾಂಶಗಳನ್ನು ನವೆಂಬರ್ನಲ್ಲಿ ಪ್ರಕಟಿಸಲಾಗಿತ್ತು. ಬಿಯು ನೀಡಿದ ಮಾರ್ಕ್ಸ್ ಕಾರ್ಡ್ಗಳು ಅವರು ಉತ್ತೀರ್ಣರಾಗಿದ್ದಾರೆಂದು ತೋರಿಸುತ್ತಿದೆ. ವಿದ್ಯಾರ್ಥಿಗಳು ತಾತ್ಕಾಲಿಕ ಪದವಿ ಪ್ರಮಾಣಪತ್ರಗಳನ್ನು ಸಹ ಹೊಂದಿದ್ದಾರೆ.
ಈಗ ನಾವು ಮೊದಲ ಸೆಮಿಸ್ಟರ್ ಪಿಜಿ ಪರೀಕ್ಷೆಗೆ ಶುಲ್ಕ ಕಟ್ಟಬೇಕಾದಾಗ ನೀವು ನಪಾಸು ಎಂದು ಪ್ರವೇಶ ಅನುಮೋದನೆ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.
ಈ ರೀತಿ ಉತ್ತೀರ್ಣ ಎಂದು ಘೋಷಿಸಿದ ಬಳಿಕ ಈಗ ಅನುತ್ತೀರ್ಣ ಎಂದು ಪ್ರಕಟಿಸಿರುವುದರ ಬಗ್ಗೆ ಸಾಕಷ್ಟು ಅನುಮಾನ ಕಾಣಿಸುತ್ತಿದೆ.