ಕಾರವಾರ: ಮಳೆ ಅಬ್ಬರದ ನಡುವೆಯೂ ಪ್ರವಾಸಕ್ಕೆಂದು ಬಂದ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಕಾಗಾಲ್ ನಲ್ಲಿ ನಡೆದಿದೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಡಲ ತೀರಗಳಿಗೆ ಪ್ರವಾಸಿಗರು ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೂ ನಿರ್ಲಕ್ಷ ಮೆರೆದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದು ಕಾಗಾಲ್ ಬಳಿ ಸಮುದ್ರದ ನೀರಿಗೆ ಇಳಿದಿದ್ದಾರೆ. ಈ ವೇಳೆ ನಾಲ್ವರು ವಿದ್ಯಾರ್ಥಿಗಳು ಸಮುದ್ರದ ಅಲೆಗೆ ಸಿಲುಕಿಕೊಂಡು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಆದರೆ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಚೈತ್ರಾ ಹಾಗೂ ಅರ್ಜುನ್ ಮೃತ ವಿದ್ಯಾರ್ಥಿಗಳಾಗಿದ್ದು, ಚೈತ್ರಾ ಮೃತದೇಹ ಪತ್ತೆಯಾಗಿದೆ. ಅರ್ಜುನ್ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಬೆಂಗಳೂರಿನಿಂದ 80 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್ ಗೆ ಬಂದು ತಂಗಿತ್ತು. ಈ ವೇಳೆ ಆಟವಾಡಲು ವಿದ್ಯಾರ್ಥಿಗಳು ಸಮುದ್ರಕ್ಕಿಳಿದಾಗ ಈ ದುರಂತ ಸಂಭವಿಸಿದೆ.