ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ಈಗ ಮತ್ತೊಂದು ಹಂತ ತಲುಪಿದ್ದು, ಶಿವಸೈನಿಕರು ಬಂಡಾಯ ಶಾಸಕರುಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ಈ ಶಾಸಕರುಗಳ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಲ್ಲಿ ಮನವಿ ಮಾಡಿದ್ದಾರೆ.
ಬಂಡಾಯ ಶಾಸಕರುಗಳ ವಿರುದ್ಧ ಸಮರ ಸಾರಿರುವ ಉದ್ಧವ್ ಠಾಕ್ರೆ ಶುಕ್ರವಾರದಂದು ಮಾತನಾಡಿ, ಪಕ್ಷದ ವಿರುದ್ಧವಾಗಿರುವ ಇವರುಗಳು ಶಿವಸೇನೆ ಹೆಸರು ಬಿಟ್ಟು ಚುನಾವಣೆಗೆ ಸ್ಪರ್ಧಿಸಲಿ. ಪ್ರಚಾರದ ವೇಳೆ ಬಾಳಾಸಾಹೇಬ್ ಅವರ ಹೆಸರು ಹೇಳದಿರಲಿ ಎಂದು ಸವಾಲು ಹಾಕಿದ್ದರು. ಆದರೆ ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ ಏಕನಾಥ್ ಶಿಂಧೆ ಅವರ ಬಣ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.
ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಎಂದು ಹೆಸರಿಸಿಕೊಂಡಿದ್ದು, ಇದೇ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಬಂಡಾಯ ಶಾಸಕ ದೀಪಕ್ ಕೇಸರ್ಕರ್, ನಾವು ಒಂದು Congress-NCP ಜೊತೆ ಹೋಗಬೇಕು ಇಲ್ಲ ಬಿಜೆಪಿ ಜೊತೆ ಸೇರಬೇಕು. ನಮಗೆ ಮೊದಲನೇ ಆಯ್ಕೆ ಸರಿ ಬರದ ಕಾರಣ ಹೊರಬಂದಿದ್ದೇವೆ. ಅಂತಿಮವಾಗಿ ನಮ್ಮ ನಾಯಕ ಏಕನಾಥ್ ಶಿಂಧೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.