ನವದೆಹಲಿ: ಎನ್ ಸಿ ಪಿ, ಕಾಂಗ್ರೆಸ್ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಲೂಟಿ ಮಾಡುವುದನ್ನೇ ಪ್ರಮುಖ ಅಜೆಂಡಾವನ್ನಾಗಿ ಮಾಡಿಕೊಂಡಿತ್ತು. ಈಗ ಸರ್ಕಾರ ಪತನದ ಅಂಚಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಅವರ ಅನೈತಿಕ ಮೈತ್ರಿ ಕಾರಣ. ಅವರ ಸರ್ಕಾರವನ್ನು ನಾವು ಬೀಳಿಸುವ ಅಗತ್ಯವಿಲ್ಲ. ಅಂತಹ ಉದ್ದೇಶವಿದ್ದರೆ ಎರಡೂವರೆ ವರ್ಷ ಬೇಕಿರಲಿಲ್ಲ ಎಂದರು.
ಅಭಿವೃದ್ಧಿ ಬಿಟ್ಟು ಲೂಟಿ ಮಾಡಿ ತಿನ್ನುವುದೇ ಅವರ ನೀತಿಯಾಗಿತ್ತು. ಅಘಾಡಿ ಡಿ ಎನ್ ಎ ಮಿಸ್ ಆಗಿದೆ. ಸರ್ಕಾರ ಇಷ್ಟು ದಿನ ಬದುಕಿದ್ದೇ ಪುಣ್ಯ. ಅಪವಿತ್ರ ಮೈತ್ರಿ ಮಾಡಿಕೊಂಡು ಈಗ ಸರ್ಕಾರ ಉಳಿಸಿ ಎಂದರೆ ನಾವೇನು ಮಾಡಲು ಆಗುತ್ತೆ? ಮಹಾರಾಷ್ಟ್ರ, ಗುಜರಾತ್ ಎಂ ಎಲ್ ಎ ಗಳನ್ನು ಕಾಂಗ್ರೆಸ್ ನವರು ಕರ್ನಾಟಕದಲ್ಲಿ ಇಟ್ಟಿರಲಿಲ್ಲವೇ? ನಮಗೆ ಕಷ್ಟ ಇದೆ ಅಂತ ಶಿವಸೇನೆಯ ಶಾಸಕರಲ್ಲ, ನೀವು ಬಂದರೂ ನೆರವು ಕೊಡುತ್ತೇವೆ. ಈ ಸರ್ಕಾರ ಬೀಳಬೇಕು ಎಂದು ಜನರು ನಿರೀಕ್ಷೆ ಮಾಡಿದ್ದಾರೆ ಎಂದು ಹೇಳಿದರು.