ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿಗೆ ಆಪಾರ ಭಕ್ತ ವೃಂದವಿದೆ. ಅಲ್ಲದೇ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದರೆ ದೇವಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾಳೆಂಬ ನಂಬಿಕೆಯೂ ಇದೆ.
ಹೀಗಾಗಿ ಭಕ್ತರು ಹಣದ ಜೊತೆಗೆ ತಮ್ಮ ಬೇಡಿಕೆಗಳ ಪತ್ರಗಳನ್ನು ಹಾಕಿದ್ದು, ಹುಂಡಿ ಎಣಿಕೆ ವೇಳೆ ಭಕ್ತರ ಚಿತ್ರ ವಿಚಿತ್ರ ಬೇಡಿಕೆಗಳಿದ್ದ ಪತ್ರಗಳು ಕಂಡು ಬಂದಿವೆ. ಈ ಪತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತನಗೆ ಯಾರೋ ಮಾಟ ಮಾಡಿಸಿದ್ದಾರೆ. ಹೀಗಾಗಿಯೇ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದೇನೆ ಎಂಬ ಆತಂಕ ಹೊಂದಿರುವ ಭಕ್ತನೊಬ್ಬ ಈ ರೀತಿ ಮಾಟ ಮಾಡಿಸಿದವರಿಗೆ ಶಿಕ್ಷೆ ನೀಡಿದ್ರೆ 50,001 ರೂ. ಕಾಣಿಕೆ ಹಾಕುವುದಾಗಿ ಬೇಡಿಕೊಂಡಿದ್ದಾನೆ. ಈ ಹಿಂದೆ ನನ್ನ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದು, ಇದೀಗ ನಷ್ಟದ ಕಾರಣ ಸಾಲಗಾರರ ಕಾಟ ಜಾಸ್ತಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಮತ್ತೊಬ್ಬ ಭಕ್ತ ತನಗಿರುವ ಆನ್ ಲೈನ್ ಗೇಮ್ ಚಟದ ಕುರಿತು ಹೇಳಿಕೊಂಡಿದ್ದು, ಈವರೆಗೆ ಕಳೆದುಕೊಂಡಿರುವ ಹಣವನು ಮರಳಿ ಕೊಡಿಸು ತಾಯಿ ಎಂದು ಬೇಡಿಕೊಂಡಿದ್ದಾನೆ. ಅಲ್ಲದೇ ಮುಂದೆ ಆನ್ ಲೈನ್ ಗೇಮ್ ಆಡಲು ತನಗೆ ಮನಸ್ಸು ಬಾರದಂತೆ ಮಾಡು ಎಂದು ಕೋರಿದ್ದಾನೆ. ಇದೇ ರೀತಿ ಹತ್ತು ಹಲವು ಕೋರಿಕೆಗಳನ್ನು ಭಕ್ತರು ದೇವಿ ಮುಂದಿಟ್ಟಿದ್ದಾರೆ.