ಮಹಾರಾಷ್ಟ್ರ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರೊಂದಿಗೆ ಈಗ ಕೆಲವೇ ಕೆಲವು ಶಾಸಕರ ಜೊತೆಗಿದ್ದು, ಶಿವಸೇನೆಯ ಬಹುತೇಕ ಶಾಸಕರುಗಳು ಬಂಡಾಯದ ಬಾವುಟ ಬೀಸಿರುವವರ ನಾಯಕತ್ವ ವಹಿಸಿರುವ ಏಕನಾಥ್ ಶಿಂಧೆಯವರ ಜೊತೆಗಿದ್ದಾರೆ.
40 ಕ್ಕೂ ಅಧಿಕ ಶಿವಸೇನೆ ಶಾಸಕರುಗಳು ಏಕನಾಥ್ ಶಿಂಧೆ ನೇತೃತ್ವದಲ್ಲಿ ಅಸ್ಸಾಂನ ಗುವಾಹತಿಯಲ್ಲಿರುವ ರಾಡಿಸನ್ ಬ್ಲೂ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದಾರೆ. ಅಲ್ಲಿಯೇ ಸಭೆ ನಡೆಸಿರುವ ಈ ಶಾಸಕರುಗಳು ಏಕನಾಥ್ ಶಿಂಧೆಯವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಎಂದು ಆಯ್ಕೆ ಮಾಡಿಕೊಂಡಿದ್ದಾರೆ.
ಇದೀಗ ಏಕನಾಥ್ ಶಿಂಧೆ ಪಕ್ಷೇತರರು ಸೇರಿದಂತೆ ಒಟ್ಟು 50 ಶಾಸಕರ ಸಹಿ ಇರುವ ಪತ್ರವನ್ನು ತೆಗೆದುಕೊಂಡು ಮುಂಬೈನತ್ತ ತೆರಳಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ್ರದ ಮೈತ್ರಿ ಸರ್ಕಾರಕ್ಕೆ ಬೆಂಬಲ ಹಿಂಪಡೆಯುವ ಪ್ರಸ್ತಾವನೆ ಇದರಲ್ಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ.
ಇದರ ಮಧ್ಯೆ ಸರ್ಕಾರ ಹಾಗೂ ಪಕ್ಷ ಎರಡನ್ನೂ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ತಮ್ಮ ಪರಮಾಪ್ತ ಸಂಜಯ್ ರಾವತ್ ಅವರ ಮೂಲಕ ಒಂದೊಂದೇ ದಾಳಗಳನ್ನು ಉರುಳಿಸುತ್ತಿದ್ದು, ಇದರಲ್ಲಿ ಎಷ್ಟರಮಟ್ಟಿಗೆ ಜಯ ಸಾಧಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.