ರಾಮನಗರ: ಮಹಾರಾಷ್ಟ್ರದಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ದೇಶದಲ್ಲಿ ಬಿಜೆಪಿ ಹೊರತಾಗಿ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇರಬಾರದು ಎಂಬುದು ಅವರ ಉದ್ದೇಶವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ರಚನೆಗೆ ಹೊರಟಿದೆ. ಬಿಜೆಪಿ ನಮಗೇನೂ ಗೊತ್ತಿಲ್ಲ ಎಂದ್ರೂ ದೇಶಕ್ಕೆ ಗೊತ್ತಿದೆ. ಅಲ್ಲಿನ ಶಾಸಕರನ್ನು ಹೈಜಾಕ್ ಮಾಡಿ ತಮ್ಮ ಆಡಳಿತವಿರುವ ರಾಜ್ಯದಲ್ಲಿ ರೆಸಾರ್ಟ್ ನಲ್ಲಿ ಕೂಡಿಟ್ಟಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಗಳ ಅಧಿಕಾರವಿರಬಾರದು. ವಿಪಕ್ಷಗಳು ಇರಬಾರದು ಕೇಂದ್ರ ಸರ್ಕಾರ ಸೇರಿದಂತೆ ದೇಶದ ಎಲ್ಲೆಡೆ ತಮ್ಮದೇ ನೇತೃತ್ವದ ಸರ್ಕಾರ ಇರಬೇಕು ಎಂಬ ತತ್ವಕ್ಕೆ ಬಿಜೆಪಿ ಬಂದಿದೆ. ಹೀಗಾಗಿ ಶಾಸಕರನ್ನು ಹೈಜಾಕ್ ಮಾಡುತ್ತಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಯಾವ ತಂತ್ರ ರೂಪಿಸಿದ್ದರೊ ಅದೇ ರೀತಿ ತಂತ್ರಗಾರಿಕೆಯನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಣೆದಿದೆ ಎಂದು ಹೇಳಿದರು.