ನೀವೇನಾದ್ರೂ ಹೊಸ ಎಸಿ ಖರೀದಿ ಮಾಡುವ ಆಲೋಚನೆಯಲ್ಲಿದ್ರೆ ಜೂನ್ ಅಂತ್ಯದವರೆಗೂ ಕಾಯಬೇಡಿ. ಯಾಕಂದ್ರೆ ಜುಲೈ 1ರಿಂದ ಏರ್ ಕಂಡಿಷನರ್ ಮತ್ತಷ್ಟು ದುಬಾರಿಯಾಗಲಿದೆ. ಬೆಲೆ ಏರಿಕೆಗೆ ಕಾರಣ ಇತ್ತೀಚೆಗಷ್ಟೆ ಘೋಷಣೆ ಮಾಡಿರುವ ಎನರ್ಜಿ ರೇಟಿಂಗ್ ನಿಯಮ. ಏಪ್ರಿಲ್ 19 ರಂದು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಹವಾನಿಯಂತ್ರಕಗಳ ಎನರ್ಜಿ ರೇಟಿಂಗ್ ನಿಯಮಗಳು ಜುಲೈ 1ರಿಂದ ಬದಲಾಗಲಿವೆ.
ಹೊಸ ನಿಯಮ 2022ರ ಜನವರಿಯಲ್ಲೇ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ತಯಾರಕರ ವಿನಂತಿಯ ಮೇರೆಗೆ ಸರ್ಕಾರವು ಆರು ತಿಂಗಳ ಕಾಲ ಹೆಚ್ಚಿನ ಅವಧಿಯನ್ನು ನೀಡಿತ್ತು. ಈ ಅವಧಿಯಲ್ಲಿ ಕಂಪನಿಗಳು ತಮ್ಮ ದಾಸ್ತಾನುಗಳನ್ನು ತೆರವುಗೊಳಿಸಲು ಅವಕಾಶ ಮಾಡಿಕೊಡಲಾಗಿತ್ತು. ಭಾರತದ ಹೊಸ ಇಂಧನ ದಕ್ಷತೆಯ ರೇಟಿಂಗ್ ಮಾನದಂಡಗಳ ಪ್ರಕಾರ ಅಸ್ತಿತ್ವದಲ್ಲಿರುವ ಏರ್ ಕಂಡಿಷನರ್‌ಗಳ ಎನರ್ಜಿ ರೇಟಿಂಗ್‌ನಲ್ಲಿ ಒಂದು ಸ್ಟಾರ್ ಕಡಿಮೆ ಮಾಡಬೇಕಾಗುತ್ತದೆ.
ಇದರರ್ಥ ಜುಲೈ 1 ರಿಂದ 5-ಸ್ಟಾರ್ AC ರೇಟಿಂಗ್ ಅನ್ನು ನೇರವಾಗಿ 4-ಸ್ಟಾರ್‌ಗೆ ಇಳಿಸಲಾಗುತ್ತದೆ. ಹೊಸ ಇಂಧನ ದಕ್ಷತೆಯ ರೇಟಿಂಗ್ ಮಾರ್ಗಸೂಚಿಗಳ ಪರಿಣಾಮವಾಗಿ ಭಾರತದಲ್ಲಿ ಎಸಿಗಳ ಬೆಲೆ ಶೇ. 7-10 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದ್ರೆ ಈ ಮಾರ್ಗಸೂಚಿಗಳನ್ನು AC ತಯಾರಕರು ಜುಲೈನಿಂದ ಯಾವ ರೀತಿ ಕಾರ್ಯಗತಗೊಳಿಸಲಿದ್ದಾರೆ ಎಂಬ ಕುರಿತು ಹೆಚ್ಚಿನ ವಿವರಗಳನ್ನು ಸ್ಪಷ್ಟಪಡಿಸಿಲ್ಲ. ಮಾರ್ಗಸೂಚಿಗಳ ಪ್ರಕಾರ AC ತಯಾರಕರು ತಮ್ಮ ಮಾದರಿಗಳ ವಿನ್ಯಾಸಗಳನ್ನು ಸ್ವಲ್ಪ ಬದಲಾಯಿಸಬೇಕಾಗುತ್ತದೆ.
ಎಸಿಯಲ್ಲಿ ಗಾಳಿಯ ಹರಿವನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗುತ್ತದೆ, ತಾಮ್ರದ ಕೊಳವೆಗಳ ಮೇಲ್ಮೈ ವಿಸ್ತೀರ್ಣ ಮತ್ತು ಶಕ್ತಿಯ ದಕ್ಷತೆಯನ್ನು ಹೆಚ್ಚಿಸಲು ಹೆಚ್ಚು ಪರಿಣಾಮಕಾರಿ ಸಂಕೋಚಕವನ್ನು ಸಹ ನೀಡಬೇಕಾಗುತ್ತದೆ. BEE ಪ್ರಕಾರ ಭಾರತದಲ್ಲಿ ಲಭ್ಯವಿರುವ ಏರ್ ಕಂಡಿಷನರ್‌ಗಳು ವಿದ್ಯುಚ್ಛಕ್ತಿಯನ್ನು ಬಳಸುವಲ್ಲಿ ಚುರುಕಾಗಿರಬೇಕು ಮತ್ತು ಹಳೆಯ ಮಾದರಿಗಳಿಗಿಂತ ಕಡಿಮೆ ಕರೆಂಟ್ ಬಳಸಬೇಕಾಗುತ್ತದೆ.
ಒಮ್ಮೆ ಈ ಬದಲಾವಣೆ ಜಾರಿಗೆ ಬಂದರೆ ಜೂನ್ 30ಕ್ಕೂ ಮೊದಲು ತಯಾರಿಸಲಾದ ಎಲ್ಲಾ ಹವಾನಿಯಂತ್ರಕಗಳ ಎನರ್ಜಿ ರೇಟಿಂಗ್ ಅವಧಿ ಮುಕ್ತಾಯಗೊಳ್ಳುತ್ತದೆ. ಇದರರ್ಥ ಈ ಎಸಿಗಳ ಸ್ಟಾರ್ ರೇಟಿಂಗ್ ಕಡಿಮೆಯಾಗುತ್ತದೆ. ಸದ್ಯ ಅಸ್ತಿತ್ವದಲ್ಲಿರುವ ಎಲ್ಲಾ ಮಾದರಿಯ ಎಸಿಗಳು ಜೂನ್ 30ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಈಗಾಗ್ಲೇ ಬಿಇಇ ಸುತ್ತೋಲೆ ಹೊರಡಿಸಿದೆ.
ಜೂನ್ 30ರ ನಂತರ ತಯಾರಿಸಲಾದ ಹೊಸ ಏರ್ ಕಂಡಿಷನರ್‌ಗಳು ನವೀಕರಿಸಿದ ಮಾನದಂಡಗಳಿಗೆ ಅನುಗುಣವಾಗಿರುವ ಫೈವ್ ಸ್ಟಾರ್ ರೇಟಿಂಗ್ ಪಡೆಯುತ್ತವೆ. ಹೊಸ ಇಂಧನ ದಕ್ಷತೆಯ ಮಾನದಂಡವು ಜುಲೈ 1 ರಿಂದ 2024ರ ಡಿಸೆಂಬರ್ 31ರವರೆಗೆ ಅನ್ವಯಿಸುತ್ತದೆ. ನಂತರ 5-ಸ್ಟಾರ್ ರೇಟ್ ಮಾಡಲಾದ ಉಪಕರಣಗಳು 4-ಸ್ಟಾರ್‌ಗೆ ಇಳಿಯುತ್ತದೆ. ಅವಧಿ ಮುಗಿದ ನಂತರ BEE ಮಾರ್ಗಸೂಚಿಗಳನ್ನು ನವೀಕರಿಸುತ್ತದೆ ಮತ್ತು ಈ ತಯಾರಕರಿಗೆ ಹೊಸ ನಿಯಮಗಳನ್ನು ತರುತ್ತದೆ.