ನವದೆಹಲಿ: ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆಯಲು ಬಯಸುವ ದಂಪತಿ ಬಾಡಿಗೆ ತಾಯಿ ಹೆಸರಲ್ಲಿ ಮೂರು ವರ್ಷಗಳ ಅವಧಿಯ ಆರೋಗ್ಯವಿಮೆ ಖರೀದಿಸಬೇಕಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯ ಪ್ರಕಾರ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಬಯಸುವ ದಂಪತಿಗಳು ಬಾಡಿಗೆ ತಾಯಿಯ ಹೆಸರಿನಲ್ಲಿ ಮೂರು ವರ್ಷ ಸಾಮಾನ್ಯ ಆರೋಗ್ಯ ವಿಮೆ ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಗರ್ಭಾವಸ್ಥೆಯಿಂದ ಪ್ರಸವದ ನಂತರ ಉಂಟಾಗಬಹುದಾದ ಎಲ್ಲಾ ಆರೋಗ್ಯ ಸಮಸ್ಯೆಗಳ ವೆಚ್ಚಗಳನ್ನು ಭರಿಸಲು ಬೇಕಾಗುವಷ್ಟು ವಿಮೆಯನ್ನು ಮಾಡಬೇಕಾಗಿದೆ. ಬಾಡಿಗೆ ತಾಯಂದಿರ ಸುರಕ್ಷತೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಬಾಡಿಗೆ ತಾಯಿಯಾಗಲು ಒಪ್ಪಿಕೊಂಡವರು ಗರಿಷ್ಠ ಮೂರು ಸಲ ಬಾಡಿಗೆ ತಾಯ್ತನ ವಿಧಾನಕ್ಕೆ ಒಳಗಾಗಬಹುದು. ಈ ಕಾಯ್ದೆಯಡಿ ಅವರ ಆರೋಗ್ಯಕ್ಕೆ ಅಪಾಯವಿದ್ದ ವೇಳೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಹಕ್ಕು ಹೊಂದಿದ್ದಾರೆ. ಬಾಡಿಗೆ ತಾಯಿ ಪ್ರಕ್ರಿಯೆಗೆ ಒಳಗಾಗುವ ಮೊದಲು ಬಾಡಿಗೆ ತಾಯಿಂದ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.