ಮುಂಬೈ: ಆಂತರಿಕ ಕಲಹದಿಂದಾಗಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರ ಪತನದ ಅಂಚಿನಲ್ಲಿದ್ದು, ಮತ್ತೊಂದೆಡೆ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಎನ್ ಸಿ ಪಿ ಅಧಿಕಾರದಲ್ಲಿರಬೇಕು ಎಂಬ ಕಾರಣಕ್ಕೆ ನಾವು ಬಿಜೆಪಿ ಜತೆ ಮೈತ್ರಿಗೆ ಸಿದ್ಧವಿಲ್ಲ ಎಂದು ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಅಧಿಕಾರದಲ್ಲಿರಲು ಬಿಜೆಪಿ ಜತೆ ಮೈತ್ರಿ ಇಲ್ಲ. ಸಿಎಂ ಉದ್ಧವ್ ಠಾಕ್ರೆ ಸಿಎಂ ಆಗಿ ಮುಂದುವರೆಯುವ ವಿಶ್ವಾಸವಿದೆ. ಒಂದು ವೇಳೆ ಸರ್ಕಾರ ಪತನವಾದರೆ ವಿಪಕ್ಷದಲ್ಲಿರುತ್ತೇವೆ ಎಂದಿದ್ದಾರೆ.
ಏಕನಾಥ್ ಶಿಂಧೆ ಠಾಕ್ರೆ ವಿರುದ್ಧ ಬಂಡಾಯದ ನೇತೃತ್ವ ವಹಿಸಿದ್ದು, 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದಿದ್ದಾರೆ. ಎಂವಿಎ ಸರ್ಕಾರ ಉಳಿದರೆ ನಾವು ಅಧಿಕಾರದಲ್ಲಿರುತ್ತೇವೆ. ಸರ್ಕಾರ ಪತನವಾದರೆ ವಿಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ. ಅಧಿಕಾರದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿಗೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.