ಸ್ವಪಕ್ಷದ 30 ಕ್ಕೂ ಅಧಿಕ ಶಾಸಕರು ಬಂಡಾಯವೆದ್ದಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಪತನಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಶಾಸಕರ ಬಹಿರಂಗ ಬಂಡಾಯದ ಹಿನ್ನಲೆಯಲ್ಲಿ ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಯಾವುದೇ ಕ್ಷಣದಲ್ಲಿ ತಮ್ಮ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.
ಇದರ ಮಧ್ಯೆ ಉದ್ದವ್ ಠಾಕ್ರೆ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೊರೊನಾ ಸೋಂಕಿಗೊಳಗಾಗಿರುವ ಅವರು ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಂಪ್ಲೇಟ್ ನ ಎಫ್ಐಆರ್ ಪ್ರತಿಯನ್ನು ತಾಜಿಂದರ್ ಬಗ್ಗಾ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದಾಗಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಬುಧವಾರದಂದು ತಿಳಿಸಿದ್ದರು. ಇದರ ಮಧ್ಯೆ ನಡೆದ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ತೊರೆದು ತಮ್ಮ ಸ್ವಂತ ನಿವಾಸ ಮಾತೋಶ್ರೀಗೆ ತೆರಳಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ್ದು, ಕೊರೊನಾ ಸೋಂಕಿಗೊಳಗಾಗಿರುವ ಕಾರಣಕ್ಕೆ ಐಸೋಲೇಶನ್ ನಲ್ಲಿರಬೇಕಾದ ಉದ್ದವ್ ಠಾಕ್ರೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂಬುದು ತಾಜಿಂದರ್ ಬಗ್ಗಾ ಅವರ ಆರೋಪವಾಗಿದೆ.