ಧಾರವಾಡ: 7 ವರ್ಷಗಳ ಹಿಂದೆ ಬೆಳಗಾವಿಯ ಕುವೆಂಪು ನಗರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಧಾರವಾಡ ಪೀಠ ಆರೋಪಿ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ.
2015ರಲ್ಲಿ ಬೆಳಗಾವಿಯ ಕುವೆಂಪು ನಗರದಲ್ಲಿ ರೀನಾ ಮಾಲಗತ್ತಿ ಹಾಗೂ ಇಬ್ಬರು ಮಕ್ಕಳಾದ 5 ವರ್ಷದ ಸಾಹಿತ್ಯ ಹಾಗೂ 15 ವರ್ಷದ ಆದಿತ್ಯ ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಪ್ರವೀಣ್ ಭಟ್ ಎಂಬುವವನನ್ನು ಬಂಧಿಸಲಾಗಿತ್ತು. ರೀನಾ ಜತೆಗಿನ ಪ್ರವೀಣ್ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿ ಜಿಲ್ಲಾ ಎರಡನೇ ಸೆಷನ್ಸ್ ನ್ಯಾಯಾಲಯ 2018, ಏಪ್ರಿಲ್ 16ರಂದು ಪ್ರವೀಣ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಕೋರ್ಟ್ ಆದೇಶ ಪ್ರಶ್ನಿಸಿ ಪ್ರವೀಣ್ ಹೈಕೋರ್ಟ್ ಮೊರೆ ಹೋಗಿದ್ದ. ಇದೀಗ ಧಾರವಾಡ ಹೈಕೋರ್ಟ್ ಪೀಠ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ಆರೋಪಿಯನ್ನು ಖುಲಾಸೆಗೊಳಿಸಿದ್ದು, ನಿರ್ದೋಷಿ ಎಂದು ತೀರ್ಪು ನೀಡಿದೆ.