ಇಂಟರ್ ಸಿಟಿ ಚಾಂಪಿಯನ್ ಶಿಪ್ ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನದ ದೇಶೀಯ ಕ್ರಿಕೆಟಿಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್ ಶಿಪ್ ನಲ್ಲಿ ತನ್ನನ್ನು ಆಯ್ಕೆ ಮಾಡದ ಕಾರಣ ಹೈದರಾಬಾದ್ ನ(ಸಿಂಧ್) ಖಾಸಿಮಾಬಾದ್ ನಲ್ಲಿ ಪಾಕಿಸ್ತಾನದ ಯುವ ಕ್ರಿಕೆಟಿಗನೊಬ್ಬ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವೇಗದ ಬೌಲರ್ ಶೋಯೆಬ್ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂಟರ್ ಸಿಟಿ ಚಾಂಪಿಯನ್ ಶಿಪ್ ಗಾಗಿ ಟ್ರಯಲ್ಸ್ ನಲ್ಲಿ ಆಯ್ಕೆ ಮಾಡದ ಕಾರಣ ಶೋಯೆಬ್ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಬಾತ್ರೂಮ್ ನಲ್ಲಿ ಮಣಿಕಟ್ಟು ಕತ್ತರಿಸಿಕೊಂಡು ಶೋಯೆಬ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದರು.
ಫೆಬ್ರವರಿ 2018 ರಲ್ಲಿ ಅಂಡರ್-19 ಕ್ರಿಕೆಟಿಗ ಕರಾಚಿಯ ಮುಹಮ್ಮದ್ ಜರಿಯಾಬ್ ಅಂಡರ್-19 ತಂಡದಿಂದ ಕೈಬಿಡಲ್ಪಟ್ಟ ನಂತರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.