ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ 6.1 ತೀವ್ರತೆಯ ಭೂಕಂಪನ ಉಂಟಾಗಿದ್ದು, 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದ ಗಡಿಯ ಸಮೀಪವಿರುವ ಪೂರ್ವ ಅಫ್ಘಾನಿಸ್ತಾನದ ಪರ್ವತದ ಗ್ರಾಮೀಣ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 1,000 ಜನರು ಸಾವನ್ನಪ್ಪಿದ್ದು, 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6.1 ತೀವ್ರತೆಯ ಕಂಪನವು ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ ಕಟ್ಟಡಗಳನ್ನು ಹಾನಿಗೊಳಿಸಿದೆ. ಕಳೆದ ವರ್ಷ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಈ ದುರಂತ ನಡೆದಿದೆ. ಅನೇಕ ಅಂತರರಾಷ್ಟ್ರೀಯ ನೆರವು ಏಜೆನ್ಸಿಗಳು ಅಫ್ಘಾನಿಸ್ತಾನವನ್ನು ತೊರೆದಿರುವುದರಿಂದ ಪರಿಹಾರ ಕಾರ್ಯಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.