ಕರ್ನಾಟಕದ ಸಾಂಸ್ಕ್ರತಿಕ ನಗರಿ ಎಂದೇ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಸ್ಥಾನವಿದೆ.
ಹಿಂದೂ ಧರ್ಮದಲ್ಲಿ ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದು ಮಾತೆಯಾದ ದೇವಿಯ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಈಕೆಯೇ ಮೈಸೂರಿನ ಅಧಿದೇವತೆ.
ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತಿ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಾ ಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿದ್ದಾಳೆ.
ಚಾಮುಂಡಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು-3489 ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡ ದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು 1101 ಮೆಟ್ಟಿಲುಗಳನ್ನು ಕಟ್ಟಿಸಿ, 700 ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಇದನ್ನು ವೀಕ್ಷಿಸಲೆಂದೇ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.