ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಜನಸಾಮಾನ್ಯರಿಗೆ ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಮಚ್ಚು ಬೀಸಿ ಪೊಲೀಸ್ ಕಾನ್ ಸ್ಟೇಬಲ್ ನಾಗೇಶ್ ಅವರ ಎದೆಗೆ ಚೂರಿ ಇರಿದ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲು ಪೊಲೀಸರು ಮುಂದಾಗಬೇಕೆಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಚೂರಿ ಇರಿತಕ್ಕೆ ಒಳಗಾಗಿ ತೀರ್ಥಹಳ್ಳಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾನ್ ಸ್ಟೇಬಲ್ ಗುರುನಾಯಕ್ ಅವರ ಆರೋಗ್ಯ ವಿಚಾರಿಸಿದ ಈಶ್ವರಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದರೋಡೆ ಪ್ರಕರಣವೊಂದರ ಆರೋಪಿ ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎದೆಗೆ ಚೂರಿಯಿಂದ ಇರಿದು ತಪ್ಪಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕಾನ್ ಸ್ಟೇಬಲ್ ಗುರುನಾಯಕ್ ಅವರ ಎದೆಗೆ ಗಾಯವಾಗಿದೆ. ಅದೃಷ್ಟವಶಾತ್ ಜೀವಭಯ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲು ಪೊಲೀಸರು ಮತ್ತೊಮ್ಮೆ ಯತ್ನಿಸಿದಾಗ ಮತ್ತೆ ಆತ ಹಲ್ಲೆಗೆ ಯತ್ನಿಸಿದ್ದಾನೆ. ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿ ದಿಟ್ಟತನ ಮೆರೆದಿದ್ದಾರೆ ಎಂದರು.
ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ನಾನು ಈ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದ್ದೆ. ಸಿಎಂ ಅವರೊಂದಿಗೆ ಶಿವಮೊಗ್ಗದ ಕಾನೂನು ಸುವ್ಯವಸ್ಥೆ ಕುರಿತಾಗಿ ಮಾತನಾಡಲಿದ್ದೇನೆ. ಗಾಂಜಾ ಮಾರಾಟ ಮತ್ತು ದರೋಡೆಯಲ್ಲಿ ತೊಡಗಿಕೊಂಡವರಿಗೆ ಭಯ ಹುಟ್ಟಿಸುವಂತ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.
ಪ್ರಧಾನಿ ಮೋದಿ ಅವರ ಬಗ್ಗೆ ಸಿದ್ಧರಾಮಯ್ಯ ಅವರ ಟೀಕೆಗೆ ಉತ್ತರಿಸಿದ ಈಶ್ವರಪ್ಪ ಬಡವರಿಗೆ ಅಕ್ಕಿ ನೀಡಿದ್ದಲ್ಲದೇ ಕೊರೋನಾ ಸಂದರ್ಭದಲ್ಲಿ ಉಚಿತ ವ್ಯಾಕ್ಸಿನ್ ಅನ್ನೂ ನೀಡಿದ್ದಾರೆ. ಸದಾ ಟೀಕೆಯನ್ನು ಮಾಡುವ ಹುಚ್ಚರಿಗೆ ಎಲ್ಲೂ ಔಷಧವಿಲ್ಲ ಎಂದು ಕುಟುಕಿದರು.
ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಬೆಂಬಲಿಸಿದವರೆಲ್ಲಾ ನಾಶವಾಗಿದ್ದಾರೆ. ಉತ್ತಪ್ರದೇಶದಲ್ಲೂ ಕಾಂಗ್ರೆಸ್ ನಾಶವಾಯ್ತು. ಹಿಂದೂ ಪರ ಇದ್ದ ಶಿವಸೇನೆ ಕಾಂಗ್ರೆಸ್ ಸಹವಾಸ ಮಾಡಿ ಹಾಳಾದ ಬಳಿಕ ಎಚ್ಚೆತ್ತುಕೊಂಡ ಶಿವಸೇನೆ ಶಾಸಕರು ತಾವಾಗಿಯೇ ಬಿಜೆಪಿಗೆ ಬರುತ್ತಿದ್ದಾರೆ. ಅವರನ್ನು ಬೇಡ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಯಾರು ಬಿಜೆಪಿಗೆ ಬರುತ್ತಾರೆ ಗೊತ್ತಿಲ್ಲ. ಆದರೆ ಸರ್ಕಾರ ಪತನವಾಗುವುದು ನಿಶ್ಚಿತ ಎಂದರು.