ಶಿವಮೊಗ್ಗ: ಕೌತುಕದ ಜತೆಗೆ ಪ್ರೇಮದ ಹಂದರವಿರುವ ‘ವಿಂಡೋಸೀಟ್’ ಕನ್ನಡ ಚಲನಚಿತ್ರ ಜುಲೈ 1ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಚಾನಲ್ ಒಂದರಲ್ಲಿ ನಿರೂಪಕಿಯಾಗಿದ್ದ ತಾವು ನಿರ್ದೇಶನದತ್ತ ಸಾಗಿದ್ದು, ಇದಕ್ಕೆ ಪೂರಕವಾಗಿ ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಇದು ನನಗೆ ಸ್ಫೂರ್ತಿ ತಂದಿತು. ನಿರ್ದೇಶಕನಿಗಿರಬೇಕಾದ ಎಲ್ಲ ವಿಷಯಗಳತ್ತ ಗಮನ ಹರಿಸಿ ಕಲಿತು ಈ ಚಿತ್ರದ ನಿರ್ದೇಶನವನ್ನು ಮಾಡಿದ್ದೇನೆ. ಇದು ನನ್ನ ಪ್ರಥಮ ನಿರ್ದೇಶನದ ಚಿತ್ರ ಎಂದರು.
ವಿಂಡೋಸೀಟ್ ಚಿತ್ರದಲ್ಲಿ ನಾಯಕ ನಟನಾಗಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ, ನಾಯಕಿಯರಾಗಿ ಅಮೃತ್ ಅಯ್ಯಂಗಾರ್ ಮತ್ತು ಸಂಜನಾ ಆನಂದ್, ಮುಖ್ಯ ಕಲಾವಿದರಾಗಿ ರವಿಶಂಕರ್, ಮಧುಸೂದನರಾವ್, ರೇಖಾ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ಅಭಿನಯಿಸಿದ್ದಾರೆ ಎಂದರು.
ಚಿತ್ರದ ನಿರ್ಮಾಣವನ್ನು ಮಂಜುನಾಥಗೌಡ ಅವರು ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದಾರೆ, ವಿಘ್ನೇಶ್ ರಾಜ್ ಛಾಯಾಗ್ರಹಣ ಒಗಿಸಿದ್ದು, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತೆ ರಚನೆ ಮಾಡಿದ್ದಾರೆ. ಹಾಡುಗಳು ಕೂಡ ಇಂಪಾಗಿವೆ ಎಂದರು.
ನಾನು ಶಿವಮೊಗ್ಗದವಳೆ. ಶಿವಮೊಗ್ಗ ಸಮೀಪದ ಆಯನೂರು ನಮ್ಮೂರು. ಹಾಗಾಗಿ ಈ ಜಿಲ್ಲೆಯ ಬಗ್ಗೆ ನನಗೆ ಸಾಕಷ್ಟು ಹೆಮ್ಮೆ ಇದೆ. ತಾಳಗುಪ್ಪ ಮತ್ತು ಸಾಗರ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಮಲೆನಾಡಿನ ಹಸಿರಿನ ಸೊಬಗು ದೃಶ್ಯಗಳಲ್ಲಿ ಮೂಡಿ ಬಂದು ಚೇತೋಹಾರಿಯಾಗಿದೆ. ಶಿವಮೊಗ್ಗದ ಜನತೆ ಇದನ್ನು ತುಂಬಾ ಇಷ್ಟ ಪಡುತ್ತಾರೆ ಎಂಬ ದೃಢ ವಿಶ್ವಾಸ ನನಗಿದೆ. ಪ್ರೇಕ್ಷಕರು ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದ ಅವರು ಮನವಿ ಮಾಡಿದರು.
ನಾಯಕ ರಘು ಈ ಚಿತ್ರದಲ್ಲಿ ಒಬ್ಬ ಹಾಡುಗಾರ. ಅವನು ತನ್ನ ದೈನಂದಿನ ಪ್ರಯಾಣದಲ್ಲಿ ರೈಲಿನ ವಿಂಡೋ ಸೀಟ್ ಅಂದರೆ ಕಿಟಕಿಯ ಪಕ್ಕ ಕುಳಿತುಕೊಳ್ಳುತ್ತಿರುತ್ತಾನೆ. ಒಂದು ನಿರ್ದಿಷ್ಟ ಕಾರಣಕ್ಕಾಗಿ ಅವನಲ್ಲಿ ಪ್ರೀತಿ ಅಂಕುರವಾಗುತ್ತದೆ. ಅಲ್ಲಿ ಅವನು ತನ್ನ ಪ್ರೀತಿ ಜೊತೆಗೆ ಜೀವನವನ್ನು ಬದಲಾಯಿಸುವ ಸಂಗತಿಗಳೊಂದಿಗೆ ಮುಖಾಮುಖಿಯಾಗುತ್ತಾನೆ. ಅನೇಕ ಏಳುಬೀಳುಗಳು ಉಂಟಾಗುತ್ತವೆ. ಕಟ್ಟುಪಾಡುಗಳು ಎದುರಾಗುತ್ತವೆ. ಇವೆಲ್ಲವೂ ವಿಂಡೋಸೀಟಿನ ಎದುರಿನ ವಾಸ್ತವದ ಬದುಕಿನೊಂದಿಗೆ ಬೆಸೆದುಕೊಳ್ಳುತ್ತವೆ. ಅವನು ಸರಪಳಿಗಳ ಸುಳಿಗೆ ಬೀಳುತ್ತಾನೋ ಅಥವಾ ಇಲ್ಲವೇ ಎಂಬುದೇ ಕಥೆಯ ಹಂದರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಿರೂಪ್ ಭಂಡಾರಿ, ನಾಯಕಿ ಅಮೃತ್ ಅಯ್ಯಂಗಾರ್ ಇದ್ದರು.