ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲೆಲ್ಲ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಘೋಷಣೆಗಳನ್ನು ಮಾಡಲಾಗುತ್ತದೆ. ವಿಮಾನಗಳ ಆಗಮನ, ನಿರ್ಗಮನ ಸೇರಿದಂತೆ ಇತರ ವಿವರಗಳನ್ನು ಹಿಂದಿ, ಇಂಗ್ಲಿಷ್ನಲ್ಲೇ ಹೇಳಲಾಗುತ್ತದೆ. ಆದ್ರೆ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ವಿಭಿನ್ನ ಪ್ರಯತ್ನಕ್ಕೆ ಕೈಹಾಕಲಾಗಿದೆ.
ಇಲ್ಲಿ ಸಂಸ್ಕೃತದಲ್ಲಿ ಘೋಷಣೆಗಳನ್ನು ನೀವು ಕೇಳಬಹುದು. ಕೋವಿಡ್ -19 ಮಾರ್ಗಸೂಚಿ ಸೇರಿದಂತೆ ಇತರ ವಿವರಗಳನ್ನು ಸಂಸ್ಕೃತದಲ್ಲಿ ಹೇಳಲಾಗುತ್ತದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸಹಯೋಗದೊಂದಿಗೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಈ ಹೊಸ ಪ್ರಯತ್ನವನ್ನು ಆರಂಭಿಸಿದೆ.
ಇದುವರೆಗೆ ವಾರಣಾಸಿ ಏರ್ಪೋರ್ಟ್ನಲ್ಲೂ ಹಿಂದಿ ಮತ್ತು ಇಂಗ್ಲಿಷ್ನಲ್ಲೇ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿತ್ತು. ಕಳೆದ ವಾರದಿಂದ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಸೇರಿಸಲಾಗಿದೆ. ಇದನ್ನು ಕೇಳಿಸಿಕೊಳ್ತಿದ್ರೆ ಪ್ರಯಾಣಿಕರಿಗೆ ಕಾಶಿಗೇ ಬಂದ ಅನುಭವವಾಗುತ್ತದೆ. ಸಂಸ್ಕೃತ ಭಾಷೆಯನ್ನು ಗೌರವಿಸಬೇಕೆಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ವಿಮಾನ ನಿಲ್ದಾಣದ ನಿರ್ದೇಶಕ ಆರ್ಯಮ ಸನ್ಯಾಲ್ ತಿಳಿಸಿದ್ದಾರೆ.
ಕೆಲವರು ಈ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಭಾಷೆಯನ್ನು ಪುನರುಜ್ಜೀವನಗೊಳಿಸಲು ಏನನ್ನೂ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ. ಸಂಸ್ಕೃತವನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡುವ ಉತ್ತಮ ಪ್ರಯತ್ನ ಇದಾಗಿದೆ ಎಂದಿರೋ ಕೆಲವರು ವಾರಣಾಸಿ ರೈಲು ನಿಲ್ದಾಣದಲ್ಲೂ ಇದು ಆಗಬೇಕು ಎನ್ನುತ್ತಿದ್ದಾರೆ. ಸಂಸ್ಕೃತ ಎಲ್ಲರಿಗೂ ಅರ್ಥವಾಗುವುದಿಲ್ಲ ಅನ್ನೋದು ಇನ್ನು ಕೆಲವರ ಆಕ್ಷೇಪ.