ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಜಾರ್ಖಂಡಿನ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಜುಲೈ 18ರಂದು ನಡೆಯಲಿರುವ ಚುನಾವಣೆಯಲ್ಲಿ ದ್ರೌಪದಿ ಮುರ್ಮು ನಿರಾಯಸವಾಗಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಮೂಲತಃ ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈಡಾಪೋಸಿ ಗ್ರಾಮದವರಾದ ದ್ರೌಪದಿ ಮುರ್ಮು ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕಡುಬಡತನದಲ್ಲಿ ತಮ್ಮ ಶಿಕ್ಷಣ ಪೂರೈಸಿದ ಅವರು ರಾಜಕೀಯ ಕ್ಷೇತ್ರದಲ್ಲಿ ಹಂತಹಂತವಾಗಿ ಮೇಲೇರಿದ್ದರು.
ಒಡಿಶಾದಲ್ಲಿ ಬಿಜೆಪಿ ಹಾಗೂ ಬಿಜೆಡಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದ್ರೌಪದಿ ಮುರ್ಮು ಮೊದಲಿಗೆ ವಾಣಿಜ್ಯ ಹಾಗೂ ಸಾರಿಗೆ ಸಚಿವರಾಗಿ ಬಳಿಕ ಮೀನುಗಾರಿಕೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು.
ಇದೀಗ ಎನ್ ಡಿ ಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಿದ್ದು, ಅವರಿಗೆ ಈಗ ಕೇಂದ್ರ ಸರ್ಕಾರದಿಂದ ಝಡ್ ಪ್ಲಸ್ ಸೆಕ್ಯೂರಿಟಿ ಒದಗಿಸಲಾಗಿದೆ.