ಹಾಸನ: ರಾಜ್ಯದ ಪೊಲೀಸ್ ಹಾಗೂ ಅಗ್ನಿಶಾಮಕ ದಳದಲ್ಲಿ ಅಗ್ನಿವೀರರಿಗೆ ಮೀಸಲಾತಿ ನೀಡುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹೊಸ ಅಗ್ನಿಪಥ್ ಯೋಜನೆ ಒಳ್ಳೆಯ ಯೋಜನೆಯಾಗಿದ್ದು, ಇದರಿಂದ ಯುವಕರಿಗೆ ಅನುಕೂಲವಾಗುತ್ತದೆ. ಅಗ್ನಿ ವೀರರಿಗೆ ಪೊಲೀಸ್ ಇಲಾಖೆಯಲ್ಲಿ ಶೇಕಡ 10 ರಷ್ಟು ಮತ್ತು ಅಗ್ನಿಶಾಮಕ ದಳದಲ್ಲಿ ಶೇಕಡ 50ರಷ್ಟು ಮೀಸಲಾತಿ ನೀಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಸೇನೆಯಲ್ಲಿ ಪಿಂಚಣಿಗೆ ಹೆಚ್ಚು ಹಣ ಖರ್ಚಾಗುತ್ತದೆ. ಸೇನೆಯ ಒಟ್ಟು ಬಜೆಟ್ 5 ಲಕ್ಷ ಕೋಟಿ ರೂ. ಆಗಿದ್ದು, ಅದರಲ್ಲಿ 1.25 ಲಕ್ಷ ಕೋಟಿ ರೂ.ಗಳನ್ನು ಪಿಂಚಣಿಗೆ ವೆಚ್ಚ ಮಾಡಲಾಗುತ್ತಿದೆ. ಈ ಹಣ ಉಳಿಸಲು ಅಗ್ನಿಪಥ್ ಯೋಜನೆ ರೂಪಿಸಲಾಗಿದ್ದು, ಇದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಹಿಂದೆ ಕಾಂಗ್ರೆಸ್ ಪಕ್ಷದ ಪಾತ್ರವಿದೆ. ಮೋದಿ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.