ಜನಪ್ರಿಯ ಕಂಟೆಂಟ್ ಡೆಲಿವರಿ ನೆಟ್‌ವರ್ಕ್ (ಸಿಡಿಎನ್) ಕ್ಲೌಡ್‌ಫ್ಲೇರ್ ಸ್ಥಗಿತಗೊಂಡಿದೆ. ಇದು ಝೆರೋಧಾ, ಗ್ರೋವ್, ಅಪ್‌ಸ್ಟಾಕ್ಸ್, ಒಮೆಗಲ್ ಮತ್ತು ಡಿಸ್ಕಾರ್ಡ್‌ನಂತಹ ಹಲವಾರು ಸೇವೆಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಇದೀಗ ಸಮಸ್ಯೆಯನ್ನು ಕ್ಲೌಡ್‌ಫ್ಲೇರ್ ಬಗೆಹರಿಸಿದ್ದು, ಸೇವೆಗಳು ಸುಗಮವಾಗಿದೆ ಎಂದು ದೃಢಪಡಿಸಿದೆ.
ಅಂತರ್ಜಾಲದಲ್ಲಿ ಹಲವಾರು ಬಳಕೆದಾರರು ಸರ್ವರ್ ಪ್ರಾಬ್ಲಂ ಅನ್ನು ಎದುರಿಸಿದ್ದಾರೆ. ಪ್ರಮುಖ ವೆಬ್ಸೈಟ್ ಗಳು ಮತ್ತು ಅಪ್ಲಿಕೇಶನ್‌ಗಳು ವೆಬ್ ಸೇವೆಗಳನ್ನು ಒದಗಿಸಲು ಕ್ಲೌಡ್‌ಫ್ಲೇರ್ ನ ನೆಟ್‌ವರ್ಕ್ ಮೂಲಸೌಕರ್ಯವನ್ನು ಅವಲಂಬಿಸಿವೆ.
ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಸಮಸ್ಯೆಯನ್ನು ತನಿಖೆ ಮಾಡುತ್ತಿರುವುದಾಗಿ ತಿಳಿಸಿದೆ. ಕೆಲವೇ ನಿಮಿಷಗಳಲ್ಲಿ, ಸಮಸ್ಯೆಯನ್ನು ಗುರುತಿಸಲಾಗಿದ್ದು, ಪರಿಹಾರವನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಸೇವೆಗಳು ಸ್ಥಗಿತಗೊಂಡಿರುವ ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಹ ಈ ಕುರಿತು ತನ್ನ ಬಳಕೆದಾರರಿಗೆ ಸೂಚನೆ ನೀಡಿವೆ.
ಇದು ಒಂದು ವಾರದೊಳಗೆ ವರದಿಯಾದ ಕ್ಲೌಡ್‌ಫ್ಲೇರ್ ನ ಎರಡನೇ ಘಟನೆಯಾಗಿದೆ. ಕಳೆದ ವಾರದ ಸ್ಥಗಿತವು ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ಹಲವಾರು ಸೇವೆಗಳು ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಭಾರತದಲ್ಲಿನ ಜನಪ್ರಿಯ ಸೇವೆಗಳಾದ ಶೋಫಿ, ಝೀರೋದಾ, ಡಿಸ್ಕಾರ್ಡ್, ಇನ್ಸುರೆನ್ಸ್ ಇತ್ಯಾದಿಗಳು ಕ್ಲೌಡ್‌ಫ್ಲೇರ್‌ನ ನೆಟ್‌ವರ್ಕ್ ನಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತವೆ. ಕ್ಲೌಡ್‌ಫ್ಲೇರ್ ಸಮಸ್ಯೆಯ ನಿಖರವಾದ ಕಾರಣ ಅಥವಾ ಯಾವುದೇ ಇತರ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಒಂದೆರಡು ಗಂಟೆಗಳ ಸ್ಥಗಿತದ ನಂತರ ಸೇವೆಗಳು ಚಾಲನೆಯಲ್ಲಿವೆ.