ಪಾಟ್ನಾ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಜೋರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ಬಿಹಾರ ಒಂದರಲ್ಲೇ ಪ್ರತಿಭಟನೆಗೆ ಸಂಬಂಧಿಸಿದಂತೆ 800ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಇನ್ನು ಪ್ರತಿಭಟನೆ ವೇಳೆ ಕೆಲವೆಡೆ ಹಿಂಸಾಚಾರಗಳು ನಡೆದಿವೆ. ವಿವಿಧೆಡೆ ರೈಲು ನಿಲ್ದಾಣಗಳನ್ನು ಲೂಟಿ ಮಾಡಲಾಯಿತು ಮತ್ತು ರೈಲುಗಳಿಗೆ ಬೆಂಕಿ ಹಚ್ಚಲಾಯಿತು. ಈ ಮಧ್ಯೆ, ಬಿಹಾರದ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರ ಗುಂಪೊಂದು ಅಂಗಡಿಯನ್ನು ಲೂಟಿ ಮಾಡುತ್ತಿರುವ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅರಾ ರೈಲ್ವೆ ಜಂಕ್ಷನ್‌ನಲ್ಲಿ ಚಿಪ್ಸ್, ಬಿಸ್ಕೆಟ್ ಮತ್ತು ಪಾನೀಯಗಳನ್ನು ಪ್ರತಿಭಟನಾಕಾರರು ಲೂಟಿ ಮಾಡಿದ್ದು, ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕೇವಲ 45 ಸೆಕೆಂಡ್‌ಗಳ ಈ ವಿಡಿಯೋ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಅವರು ನಮ್ಮ ಭವಿಷ್ಯದ ಸೈನಿಕರಾಗಲು ಸಾಧ್ಯವಿಲ್ಲ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕೆಲವರು ಅಂಗಡಿಗಳಿಂದ ವಸ್ತುಗಳನ್ನು ಲೂಟಿ ಮಾಡುತ್ತಿರುವುದನ್ನು ಕಾಣಬಹುದು.
ಕೇಂದ್ರ ಸರಕಾರದ ಅಗ್ನಿಪಥ ಯೋಜನೆಯ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನಾ ಕಾವು ತೀವ್ರಗೊಂಡಿದೆ. ಈ ಯೋಜನೆ ಪ್ರಕಾರ, ಕೇವಲ 4 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದು ನಂತರ ನಿವೃತ್ತಿ ನೀಡಲಾಗುತ್ತದೆ. ಇದು ಯುವಕರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.