ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 11:55ಕ್ಕೆ ಪ್ರಧಾನಿ ಮೋದಿ ಯಲಹಂಕ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇಂದು ಬೆಂಗಳೂರು ವಿವಿ ಆವರಣದಲ್ಲಿರುವ ಅಂಬೇಡ್ಕರ್ ಎಕನಾಮಿಕ್ಸ್ ವಿವಿ ಆವರಣ ಉದ್ಘಾಟನೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಮೆದುಳು ಸಂಶೋಧನಾ ಕೇಂದ್ರ ಹಾಗೂ ಸೂಪರ್ ಕಂಪ್ಯೂಟರಿಂಗ್ ಸೌಲಭ್ಯ ಉದ್ಘಾಟಿಸಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ʼಏಳು ಸುತ್ತಿನ ಕೋಟೆʼಯಂತಾದ ಬೆಂಗಳೂರು
ಕೆಂಗೇರಿ ಬಳಿಯ ಕೊಮ್ಮಘಟ್ಟ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಭದ್ರತೆ ಜವಾಬ್ದಾರಿಯನ್ನು ಕಮಿಷ್ನರ್ ಪ್ರತಾಪ್ ರೆಡ್ದಿ ಹೆಗಲಿಗೆ ವಹಿಸಲಾಗಿದ್ದು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 8 ಡಿಸಿಪಿಗಳು, 25 ಎಸಿಪಿಗಳನ್ನು ನಿಯೋಜಿಸಲಾಗಿದೆ.
123 ಇನ್ಸ್ ಪೆಕ್ಟರ್ ಗಳು, 125 ಸಬ್ ಇನ್ಸ್ ಪೆಕ್ಟರ್ ಗಳು, ಗರುಡ ಪಡೆ, ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಂಚರಿಸಲಿರುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೆಜ್ಜೆ ಹೆಜ್ಜೆಗೂ ತಪಾಸಣೆ ನಡೆಸಲಾಗುತ್ತಿದೆ.