ಶಿವಮೊಗ್ಗ: ಸರ್ಕಾರ ಮತ್ತು ಸರ್ಕಾರಿ ಅನುದಾನದ ಸಂಸ್ಥೆಗಳು ಸರ್ಕಾರಿ ಪ್ರಾಯೋಜಿತ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ -ಮಂಡಳಿಗಳನ್ನು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಪಡೆದುಕೊಳ್ಳುವಂತಿದಿಲ್ಲ.
ಹೀಗಿದ್ದರೂ, ಸುಳ್ಳು ಮಾಹಿತಿ ನೀಡಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ವಾಣಿಜ್ಯ ವಾಹನ ಓಡಿಸುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಇರುವ ಕುಟುಂಬಗಳು ಮತ್ತು 1.20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಹೆಚ್ಚಿನ ಒಣಭೂಮಿ ಅಥವಾ ನೀರಾವರಿ ಜಮೀನು ಹೊಂದಿದ್ದ ಕುಟುಂಬದವರು ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿದ ಕುಟುಂಬದವರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ.
ಆದರೆ, ಸುಳ್ಳು ಮಾಹಿತಿ ನೀಡಿ ಅನೇಕರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಬಡಕುಟುಂಬಗಳಿಗೆ ತಲುಪಬೇಕಿದ್ದ ಸೌಲಭ್ಯ ಪಡೆದು ವಂಚಿಸುತ್ತಿದ್ದಾರೆ. ಉಚಿತವಾಗಿ ಪಡಿತರ ಪಡೆಯುವ ಜೊತೆಗೆ ಕೆಲವು ವೈದ್ಯಕೀಯ ಸೌಲಭ್ಯಗಳು ಕೂಡ ಬಿಪಿಎಲ್ ಕಾರ್ಡ್ ದಾರರಿಗೆ ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ ಅನರ್ಹರನ್ನು ಪತ್ತೆಮಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸುಮಾರು 16 ಸಾವಿರ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾರೆ.