ಬಾಲಿವುಡ್ನಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನೆಮಾಗಳನ್ನ ಕೊಟ್ಟವರು ನಿರ್ದೇಶಕ ಕರಣ್ ಜೋಹರ್. ಇವರು ಸಿನೆಮಾಗಳಿಗಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಾನೇ ಹೆಚ್ಚು ಸುದ್ದಿಯಲ್ಲಿದ್ದವರು. ಈ ಮಧ್ಯೆ ಕರಣ್ ಜೋಹರ್ ಬಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್ ಒಂದು ಹರಿದಾಡ್ತಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಕೈವಾಡ ಇದೆ ಅಂತ ಆರೋಪ ಎದುರಿಸುತ್ತಿರೊ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕರಣ್ ಜೋಹರ್ ಅವರಿಂದ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಪ್ಲಾನ್ ರೂಪಿಸಿದ್ದರು ಅನ್ನೋ ವಿಷಯ ಈಗ ರಿವೀಲ್ ಆಗಿದೆ.
ಧರ್ಮಾ ಪ್ರೊಡಕ್ಷನ್ ಹೌಸ್ನ ಮಾಲೀಕರಾಗಿರೋ ಕರಣ್ ಜೋಹರ್, ನಟ, ನಿರ್ಮಾಪಕ, ನಿರ್ದೇಶಕ, ನಿರೂಪಕನಾಗಿ ಗುರುತಿಸಿಕೊಂಡವರು. ನೂರಾರು ಕೋಟಿ ಆಸ್ತಿ ಒಡೆಯರಾಗಿರೋ ಇವರಿಂದ 5 ಕೋಟಿ ರೂಪಾಯಿ ವಸೂಲಿ ಮಾಡಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಲ್ಲಿದ್ದ ಇನ್ನೊಬ್ಬ ಖದೀಮ ಸಿದ್ದೇಶ್ ಕಾಂಬ್ಲೆ ಪ್ಲಾನ್ ಮಾಡಿದ್ದ ಅನ್ನೋ ವಿಷಯ ಬೆಳಕಿಗೆ ಬಂದಿದೆ. ಇದು ಕರಣ್ ಗೆಳೆಯರು ಮತ್ತು ಕುಟುಂಬದವರಲ್ಲಿ ಆತಂಕ ಮೂಡಿಸಿದೆ.
ಸಿಧು ಅವರನ್ನ ಶೂಟರ್ ಸಂತೋಷ್ ಜಾಧವ್ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸಂತೋಷ್ ಜತೆ ಸಿದ್ದೇಶ್ ಸ್ನೇಹ ಉತ್ತಮವಾಗಿತ್ತು. ಇವರಿಬ್ಬರೂ ಲಾರೆನ್ಸ್ ಗ್ಯಾಂಗ್ನವರಾಗಿದ್ದರು. ಪೊಲೀಸ್ ತನಿಖೆ ವೇಳೆ ಸಿದ್ದೇಶ ಈ ಮಾತನ್ನ ಒಪ್ಪಿಕೊಂಡಿದ್ದಾನೆ ಅನ್ನೋ ಮಾಹಿತಿ ಇದೆ. ಆದರೆ ಈ ಕುರಿತು ಪೊಲೀಸರು ಎಲ್ಲೂ ಸ್ಪಷ್ಟನೆಯನ್ನ ಕೊಟ್ಟಿಲ್ಲ.
ಒಂದು ಮಾಹಿತಿ ಪ್ರಕಾರ, ಓರ್ವ ಹಿರಿಯ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಸಿದ್ಧೇಶ್ ಕೊಟ್ಟಿರೋ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶ ಇದೆ, ಎಷ್ಟು ಸುಳ್ಳಿದೆ ಅಂತ ಈಗಲೇ ಹೇಳುವುದು ಅಸಾಧ್ಯ. ಯಾಕಂದ್ರೆ ಇದೆಲ್ಲ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ಲಾನ್, ಅಥವಾ ಕೇಸ್ನ ದಾರಿ ತಪ್ಪಿಸೋ ಒಂದು ವಿಧ.
“ಗ್ಯಾಂಗ್ಸ್ಟರ್ಗಳ ಅಸಲಿ ಉದ್ದೇಶ ಅವರ ಹೆಸರು ಸೆಲೆಬ್ರಿಟಿಗಳ ಜೊತೆಗೆ ಕೇಳಿ ಬರಬೇಕು ಅನ್ನೋದು. ರಾಜಕಾರಣಿಗಳ ಜೊತೆಗೊ ಇಲ್ಲಾ, ಸಿನೆಮಾ ಜಗತ್ತಿನ ಫೇಮಸ್ ವ್ಯಕ್ತಿಗಳೊಂದಿಗೆ ಹೆಸರು ಕೇಳಿ ಬಂದರೆ, ಪೊಲೀಸರ ಮೇಲೆ ಒತ್ತಡ ಬರಬಹುದು ಅನ್ನೋ ಲಾಜಿಕ್ ಅವರದ್ದು. ಇದೇ ಕಾರಣಕ್ಕೆ ಈ ರೀತಿಯ ಪ್ಲಾನ್ ಆಗಾಗ ಮಾಡುತ್ತಿರುತ್ತಾರೆ. ಪಂಜಾಬ್ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಇದೆಲ್ಲ ಸಾಮಾನ್ಯ“ ಅಂತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪಂಜಾಬಿ ಪಾಪ್ ಸಿಂಗರ್ ಮೂಸೆವಾಲಾ ಹತ್ಯೆಯ ನಂತರ ಬಿಷ್ಣೋಯ್ ಗ್ಯಾಂಗ್ನವರು ಮಾಧ್ಯಮದ ಗಮನ ಸೆಳೆಯಲು ಬಾಲಿವುಡ್ ಸೆಲೆಬ್ರಿಟಿಗಳಿಗೆ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡುವುದನ್ನ ಆರಂಭ ಮಾಡಿದ್ದರು. ಇದೆಲ್ಲದರ ಹಿಂದೆ ವಿಕ್ರಮ್ ಬರಾಡ್ ಕೈವಾಡ ಇತ್ತು ಅನ್ನಲಾಗಿದೆ. ಈ ದರೋಡೆಕೋರರು ಬಾಲಿವುಡ್ ಭಾಯ್ಜಾನ್ ಅಂತಾನೇ ಫೇಮಸ್ ಆಗಿರೋ ಸಲ್ಮಾನ್ ಖಾನ್ ಅವರಿಂದಲೂ ದುಡ್ಡು ವಸೂಲಿಗಾಗಿ ಬೆದರಿಕೆ ಹಾಕಿದ್ದರು ಅನ್ನೋ ಮಾಹಿತಿ ಕೂಡಾ ಇದೆ.