ಬೆಂಗಳೂರು: ಕೇಂದ್ರ ಸರ್ಕಾರದ ಅಗ್ನಿಪಥ್ ಸೇನಾ ನೇಮಕಾತಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಈ ಹೊಸ ಯೋಜನೆ ಜಾರಿಗೆ ತರಲು ಹೇಳಿದ್ದು ಯಾರು? ಸಂಸತ್ ಸದಸ್ಯರ ಕಮಿಟಿಯಿಂದ ಶಿಫಾರಸ್ಸಾಗಿದೆಯಾ? ನಾಲ್ಕು ವರ್ಷದ ಬಳಿಕ ಅಗ್ನಿವೀರರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಗ್ನಿಪಥ್ ಯೋಜನೆ ಬಗ್ಗೆ ಸಲಹೆ ನೀಡಿದವರು ಯಾರು? ಸೇನಾ ವಿಭಾಗದಿಂದ ಯಾರಾದರೂ ಸಲಹೆ ಕೊಟ್ಟಿದ್ದಾರಾ? 4 ವರ್ಷದ ಬಳಿಕ ಶೇ.75ರಷ್ಟು ಜನರನ್ನು ಹೊರಕಳಿಸುತ್ತೀರಿ. ನಾಲ್ಕು ವರ್ಷದವರೆಗೆ ಅವರಿಂದ ಏನು ಕೆಲಸ ಮಾಡಿಸುತ್ತೀರಿ? ಆಯ್ಕೆಯಾಗುವ 10 ಲಕ್ಷ ಜನರು ಯಾರು? ಅವರನ್ನು ಆಯ್ಕೆ ಮಾಡುವವರು ಯಾರು ಆರ್.ಎಸ್.ಎಸ್ ಮುಖಂಡರೋ? ಇಲ್ಲ ಆರ್ಮಿಯವರೋ? ಇದೊಂದು ಆರ್.ಎಸ್.ಎಸ್ ಯೋಜನೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಆರ್.ಎಸ್.ಎಸ್ ಕವಾಯತ್ ಮಾಡಿರುವವರು ಇದ್ದಾರಲ್ಲ, ಅವರನ್ನು ಸೇನೆಗೆ ತುಂಬಿ ಸೆಟಪ್ ಮಾಡಿ. ನಾಜಿ ಸಾಮ್ರಾಜ್ಯ ಇದ್ದಾಗಲೇ ಆರ್.ಎಸ್.ಎಸ್ ಉದ್ಭವವಾಯಿತು. ಹಾಗಾಗಿ ನಾಜಿ ಸಾಮ್ರಾಜ್ಯ ಜಾರಿಗೆ ತರಬೇಕೆಂದು ಅಗ್ನಿವೀರರ ತಯಾರಿ ಮಾಡಲು ಹೊರಟಿದ್ದಾರೆ. ಅಗ್ನಿಪಥ್ ಸೇನಾ ಯೋಜನೆಯಲ್ಲ, ಆರ್.ಎಸ್.ಎಸ್ ನ ಯೋಜನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.