ನವದೆಹಲಿ; ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದರೂ ಬಗ್ಗದ ರಕ್ಷಣಾ ಸಚಿವಾಲಯ, ಅಗ್ನಿಪಥ್ ಯೋಜನೆ ಜಾರಿ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಅಲ್ಲದೇ ನೇಮಕಾತಿ ಜೂನ್ 24ರಂದು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮೂರು ಸೇನಾ ಮುಖ್ಯಸ್ಥರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಜೂನ್ 24ರಂದು ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ. ಜುಲೈ 24ರಂದು ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಯುತ್ತದೆ. ಡಿಸೆಂಬರ್ 30ರಂದು ಮೊದಲ ಬ್ಯಾಚ್ ನ ಅಗ್ನಿವೀರರ ನೇಮಕಾತಿ ನಡೆಯಲಿದೆ ಎಂದು ಏರ್ ಮಾರ್ಷಲ್ ಎಸ್.ಕೆ.ಝಾ ತಿಳಿಸಿದ್ದಾರೆ.
ಭೂಸೇನೆಗೆ ಮೊದಲ ಬ್ಯಾಚ್ ನಲ್ಲಿ 25,000 ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಡಿಸೆಂಬರ್ ಆರಂಭದಲ್ಲಿ ಮೊದಲ ಬ್ಯಾಚ್ ಹಾಗೂ ಫೆಬ್ರವರಿ 2023ರೊಳಗೆ 2ನೇ ಬ್ಯಾಚ್ ನ ಅಗ್ನಿವೀರರ ನೇಮಕಾತಿ ನಡೆಯಲಿದೆ ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ತಿಳಿಸಿದ್ದಾರೆ.
ನವೆಂಬರ್ 21ರಿಂದ ನೌಕಾಪಡೆಗೆ ಅಗ್ನಿವೀರರ ನೇಮಕಾತಿ ಆರಂಭವಾಗುತ್ತದೆ. ಮೊದಲ ಬ್ಯಾಚ್ ನ ಅಗ್ನಿವೀರರಿಗೆ ಓಡಿಶಾದ ಐ ಎನ್ ಎಸ್ ಚಿಲ್ಕಾದಲ್ಲಿ ತರಬೇತಿ ನೀಡಲಾಗುವುದು. ಅಗ್ನಿವೀರರ ನೇಮಕಾತಿಗೆ ಯುವತಿಯರೂ ಅರ್ಜಿ ಸಲ್ಲಿಸಬಹುದು ಎಂದು ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.