ಬೆಳಗಾವಿ: ದೇವಸ್ಥಾನದ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ, ಜಗಳ ವಿಕೋಪಕ್ಕೆ ತಿರುಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೌಂಡವಾಡ ಗ್ರಾಮದಲ್ಲಿ ನಡೆದಿದೆ.
ಸತೀಶ್ ಪಾಟೀಲ್ ಕೊಲೆಯಾದ ವ್ಯಕ್ತಿ. ದೇವಸ್ಥಾನದ ಜಾಗದ ವಿಚಾರವಾಗಿ ಚರ್ಚಿಸಲು ಗ್ರಾಮಸ್ಥರು ಸಭೆ ಕರೆದಿದ್ದರು. ಈ ವೇಳೆ ಎರಡು ಗುಂಪಿನ ನಡುವೆ ಗಲಾಟೆ ಆಗಿದೆ. ತಡರಾತ್ರಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.
ಇದರಿಂದ ಮೃತ ಸತೀಶ್ ಪಾಟೀಲ್ ಕಡೆಯವರ ಆಕ್ರೋಶ ಇನ್ನಷ್ಟು ತೀವ್ರಗೊಂಡಿದ್ದು, ಗ್ರಾಮದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಎರಡು ಹುಲ್ಲಿನ ಬಣವೆಗೂ ಬೆಂಕಿಯಿಟ್ಟಿದ್ದಾರೆ. 8ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಗುಂಪು ಘರ್ಷಣೆ, ಕೊಲೆ, ವಾಹನಗಳಿಗೆ ಬೆಂಕಿ ಘಟನೆಯಿಂದಾಗಿ ಗೌಂಡವಾಡಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.