ಬೆಂಗಳೂರು: ಅಡಿಕೆ ಬೆಳೆಗೆ ನಿಗದಿಪಡಿಸಿದ ಅಂದಾಜುವೆಚ್ಚ ಹೆಚ್ಚಳಕ್ಕೆ ದೆಹಲಿಗೆ ನಿಯೋಗ ತೆರಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಡಿಕೆ ಬೆಳೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಅಂದಾಜುವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡುವಂತೆ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ನಿಯೋಗ ದೆಹಲಿಗೆ ತೆರಳಲಿದೆ ಎಂದರು.
ಮಲೆನಾಡಿನ ಲಕ್ಷಾಂತರ ರೈತರು ಸೇರಿದಂತೆ ರೈತ ಕಾರ್ಮಿಕ ಕುಟುಂಬಗಳಿಗೆ ಅಡಿಕೆ ಬೆಳೆ ಆರ್ಥಿಕ ಬೆನ್ನೆಲುಬಾಗಿದೆ. ಅಡಿಕೆ ಬೆಳೆಗೆ ಸುಸ್ಥಿರ ಬೆಲೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ರೈತರಿಗೆ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದ ಅವರು, ಪ್ರಸ್ತುತ ಹಣದುಬ್ಬರ ಮೊದಲಾದ ಕಾರಣಗಳಿಂದ ಪ್ರತಿ ಕ್ವಿಂಟಾಲ್ ಅಡಿಕೆ ಉತ್ಪಾದನೆ ಅಂದಾಜುವೆಚ್ಚ 25 ಸಾವಿರ ರೂ.ನಷ್ಟಿದೆ. ಆರು ವರ್ಷಗಳ ಹಿಂದಿನ ಬೆಲೆ ನಿಗದಿ ಮಾಡಲಾಗಿದೆ. ಈ ಬೆಲೆಯನ್ನು ಪರಿಷ್ಕರಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಕೃಷಿ ಸಚಿವರಿಗೆ ಅಂದಾಜುವೆಚ್ಚ ಪರಿಷ್ಕರಿಸಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗುವುದು ಎಂದರು.