ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದೆ. ಆಪ್ ಜನಪ್ರಿಯಗೊಳಿಸಲು ಹತ್ತು ಹಲವು ವೈಶಿಷ್ಟ್ಯಗಳನ್ನು ಈಗಾಗಲೇ ಪರಿಚಯಿಸಿರುವ ವಾಟ್ಸಾಪ್ ಈಗ ಹೊಸ ವ್ಯವಸ್ಥೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.
ಸದ್ಯ ಇದು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಅಂಡ್ರಾಯ್ಡ್ ಹಾಗೂ ಐ ಫೋನ್ ಬಳಕೆದಾರರಿಗೆ ಸಿಗಲಿದೆ. ನೂತನ ಸೇವೆಯಲ್ಲಿ ವಾಟ್ಸಾಪ್ ಬಳಕೆದಾರರು ತಮ್ಮ ಪ್ರೊಪೈಲ್ ಪಿಕ್ಚರ್ ನ್ನು ಯಾರು ವೀಕ್ಷಿಸಬಹುದೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯಾರು ವೀಕ್ಷಿಸಬಾರದೆಂಬುದನ್ನು ಬಳಕೆದಾರರು ನಿರ್ಬಂಧಿಸಬಹುದಾಗಿದೆ. ಜೊತೆಗೆ ʼಲಾಸ್ಟ್ ಸೀನ್ʼ ಕೂಡಾ ಯಾರು ವೀಕ್ಷಿಸಬಹುದೆಂಬುದನ್ನು ಸೆಟ್ ಮಾಡಬಹುದಾಗಿದೆ.
ಇದರಿಂದಾಗಿ ಪ್ರೊಪೈಲ್ ಪಿಕ್ಚರ್ ಎಲ್ಲರೂ ವೀಕ್ಷಣೆ ಮಾಡುವುದನ್ನು ತಪ್ಪಿಸಬಹುದಾಗಿದೆ. ಜೊತೆಗೆ ʼಲಾಸ್ಟ್ ಸೀನ್ʼ ಆಯ್ಕೆಯೂ ಇದೇ ರೀತಿ ನಿರ್ದಿಷ್ಟ ವ್ಯಕ್ತಿಗಳು ನೋಡುವುದನ್ನು ನಿರ್ಬಂಧಿಸಬಹುದಾಗಿದೆ.
ಕೆಲ ದಿನಗಳ ಹಿಂದೆ ವಾಟ್ಸಾಪ್ ಚಾಟ್, ವಿಡಿಯೋ, ಫೋಟೋ ಮೊದಲಾದ ವಿವರಗಳನ್ನು ಅಂಡ್ರಾಯ್ಡ್ ನಿಂದ ಐ ಫೋನ್ ಗೆ ವರ್ಗಾಯಿಸಲು ವಾಟ್ಸಾಪ್ ಅವಕಾಶ ಮಾಡಿಕೊಟ್ಟಿದ್ದು, ಇದನ್ನು ಮತ್ತಷ್ಟು ಉತ್ತಮಪಡಿಸಲು ಸಂಸ್ಥೆ ಮುಂದಾಗಿದೆ.