ಕಾರ್ಯಕ್ರಮ ವರದಿ ಮಾಡುವಾಗ ಮೂರ್ಛೆಹೋದ ಕ್ಯಾಮರಾಮನ್ಗೆ ತಕ್ಷಣವೇ ಪ್ರಾಥಮಿಕ ವೈದ್ಯಕೀಯ ನೆರವು ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕಿಶನ್ರಾವ್ ಕರಾಡ್ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಡಾ.ಭಾಗವತ್ ಅವರ ಕಾರ್ಯಕ್ರಮವನ್ನು ವರದಿ ಮಾಡುವಾಗ, ಛಾಯಾಗ್ರಾಹಕನ ಪಲ್ಸ್ ರೇಟ್ ಅಪಾಯಕಾರಿ ಮಟ್ಟಕ್ಕೆ ಇಳಿದು ಪ್ರಜ್ಞಾಹೀನರಾದರು.
ತಕ್ಷಣ ಗಮನಿಸಿದ ಡಾಕ್ಟರ್ ಭಾಗವತ್ ಸಹಾಯಕ್ಕೆ ಧಾವಿಸಿ, ಅವರ ನಾಡಿಮಿಡಿತವನ್ನು ಪರಿಶೀಲಿಸಿದರು. ನಂತರ ನಾಡಿ ಬಡಿತ ಹೆಚ್ಚಿಸಲು ಅವರ ಪಾದ ಒತ್ತಲು ಪ್ರಾರಂಭಿಸಿದರು.
5-7 ನಿಮಿಷಗಳ ನಂತರ ಛಾಯಾಗ್ರಾಹಕನ ನಾಡಿಮಿಡಿತ ಕ್ರಮೇಣ ಹೆಚ್ಚಾಯಿತು, ನಂತರ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಕೆಲವು ಸಿಹಿತಿನಿಸು ನೀಡಿದಾಗ ಪರಿಸ್ಥಿತಿ ಸುಧಾರಿಸಿತು.
ಈ ನಡುವೆ, ಡಾ ಭಾಗವತ್ ನಡವಳಿಕೆ, ಮಾನವೀಯತೆ ಸುತ್ತಮುತ್ತಲಿನವರ ಮೆಚ್ಚುಗೆಯನ್ನು ಗಳಿಸಿತು. ವಿಷಯ ತಿಳಿದ ಸ್ವಾಮಿ ರಾಮ್ದೇವ್, ತರುಣ್ ಶರ್ಮಾ, ಪ್ರೀತಿ ಗಾಂಧಿ ಮುಂತಾದವರು ಸಚಿವರ ಸ್ಪಂದನೆಯನ್ನು ಶ್ಲಾಘಿಸಿದರು.
ವೈದ್ಯರಾಗಿದ್ದ ಕೇಂದ್ರ ಸಚಿವ ಭಾಗವತ್ ಕರಾಡ್ ಈ ರೀತಿ ಜೀವ ಉಳಿಸಿದ್ದು ಇದು ಎರಡನೇ ಬಾರಿ. ಕಳೆದ ವರ್ಷ ನವೆಂಬರ್ನಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಪ್ರಾಥಮಿಕ ವೈದ್ಯಕೀಯ ನೆರವು ನೀಡಿದ್ದರು.
ಮಹಾರಾಷ್ಟ್ರದವರಾದ ಡಾ. ಭಾಗವತ್ ಕರಾಡ್ ರಾಜ್ಯಸಭಾ ಸದಸ್ಯರು. 2021 ರ ಜುಲೈನಲ್ಲಿ ನರೇಂದ್ರ ಮೋದಿ ಸಂಪುಟಕ್ಕೆ ಸೇರಿದ್ದಾರೆ.