ಕೇಂದ್ರ ಸರ್ಕಾರ ‘ಅಗ್ನಿ ಪಥ್’ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಯೋಜನೆಯನ್ವಯ 17.5 ವರ್ಷದಿಂದ 21 ವರ್ಷದೊಳಗಿನವರು ಶಿಕ್ಷಣ ಸಂಸ್ಥೆಗಳಿಂದ ಆಯ್ಕೆ ರಾಲಿ ಮೂಲಕ ಅಗ್ನಿ ವೀರರಾಗಿ ನೇಮಕಗೊಳ್ಳಲಿದ್ದಾರೆ. ಇವರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಿದ್ದು, ಉಳಿದ ಮೂರೂವರೆ ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಆ ಬಳಿಕ ಶೇಕಡಾ 25ರಷ್ಟು ಪರರನ್ನು ಶಶಸ್ತ್ರ ಪಡೆಗಳಲ್ಲಿ ಪೂರ್ಣಾವಧಿಗೆ ನೇಮಕಗೊಳ್ಳಲಿದ್ದು ಉಳಿದವರು ‘ಅಗ್ನಿ ವೀರ’ರಾಗಿ ಮತ್ತೆ ವಾಪಸ್ ಬರಲಿದ್ದಾರೆ. ಈ ವಿಚಾರ ಈಗ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ಇದರ ಮಧ್ಯೆ ಕೇಂದ್ರ ಸರ್ಕಾರ ಅಗ್ನಿಪತ್ ಯೋಜನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ ಹೊರ ಬರುವವರು ‘ಅಗ್ನಿ ವೀರ’ರು ಏನೇನು ಮಾಡಬಹುದು ಎಂಬುದರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ನಾಲ್ಕು ವರ್ಷಗಳ ಬಳಿಕ ಸಶಸ್ತ್ರ ಪಡೆಗಳಿಂದ ಹೊರಬರುವ ‘ಅಗ್ನಿ ವೀರ’ರಿಗೆ 12 ಲಕ್ಷ ರೂಪಾಯಿಗಳ ಮೊತ್ತ ಸಿಗಲಿದೆ.
ಇವರುಗಳಿಗೆ ಬ್ಯಾಂಕುಗಳಲ್ಲಿ ಆದ್ಯತೆ ಮೇರೆಗೆ ಸಾಲ ನೀಡಲಿದ್ದು, ಸ್ವಂತ ಉದ್ಯಮ ಸ್ಥಾಪಿಸಬಹುದಾಗಿದೆ.
‘ಅಗ್ನಿ ವೀರ’ರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಬಯಸಿದರೆ ಅಂತವರಿಗೆ 12ನೇ ತರಗತಿಗೆ ಸಮಾನವಾದ ಸರ್ಟಿಫಿಕೇಟ್ ನೀಡುವುದರ ಜೊತೆಗೆ ಅವರ ಆಯ್ಕೆಯ ಬ್ರಿಡ್ಜಿಂಗ್ ಕೋರ್ಸ್ ಕೊಡಲಾಗುತ್ತದೆ.
ಅಗ್ನಿ ವೀರರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ, ಅಸ್ಸಾಮ್ ರೈಫಲ್ಸ್ ಮೊದಲಾದವುಗಳಲ್ಲೂ ಸಹ ನೇಮಕಾತಿಗೆ ಆದ್ಯತೆ ನೀಡಲಾಗುತ್ತದೆ.
ಜೊತೆಗೆ ವಿವಿಧ ರಾಜ್ಯ ಸರ್ಕಾರಗಳ ಪೊಲೀಸ್ ನೇಮಕಾತಿ ವೇಳೆ ಈ ಅಗ್ನಿ ವೀರರಿಗೆ ಪ್ರಾಶಸ್ತ್ಯ ನೀಡಲಾಗುವುದು.