ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣ್ತಿದೆ. ಇದೀಗ ಮತ್ತೊಮ್ಮೆ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ. ದೆಹಲಿಯ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾದ ಮದರ್ ಡೈರಿ, ಖಾದ್ಯ ತೈಲದ ಬೆಲೆಯನ್ನು ಲೀಟರ್ಗೆ 15 ರೂಪಾಯಿವರೆಗೆ ಕಡಿತ ಮಾಡಿದೆ.
ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಖಾದ್ಯತೈಲದ ಬೆಲೆ ಕಡಿಮೆಯಾಗಿದೆ. ಮದರ್ ಡೈರಿ ತನ್ನ ಖಾದ್ಯ ತೈಲಗಳನ್ನು ಧಾರಾ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಧಾರಾ ಸಾಸಿವೆ ಎಣ್ಣೆ ಪ್ರತಿ ಲೀಟರ್ಗೆ 208 ರೂಪಾಯಿಯಿಂದ 193 ರೂ.ಗೆ ಇಳಿಕೆಯಾಗಿದೆ.
ಇದಲ್ಲದೆ ಧಾರಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ದರ ಪ್ರತಿ ಲೀಟರ್ಗೆ 235 ರೂಪಾಯಿಯಿಂದ 220ಕ್ಕೆ ಇಳಿಕೆ ಮಾಡಲಾಗಿದೆ. ಧಾರಾ ಸಂಸ್ಕರಿಸಿದ ಸೋಯಾಬೀನ್ ಎಣ್ಣೆ 1 ಲೀಟರ್ಗೆ 209 ರೂಪಾಯಿ ಇತ್ತು. ಈಗ 194 ರೂಪಾಯಿಗೆ ಬಂದು ತಲುಪಿದೆ. ಧಾರಾ ಎಡಿಬಲ್ ಆಯಿಲ್ಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್ಪಿ) ಲೀಟರ್ಗೆ 15 ರೂಪಾಯಿವರೆಗೆ ಕಡಿತ ಮಾಡುವುದಾಗಿ ಮದರ್ ಡೈರಿ ಮಾಹಿತಿ ನೀಡಿದೆ.
ಬೆಲೆ ಇಳಿಕೆ ಸರ್ಕಾರ ತೆಗೆದುಕೊಂಡ ಕ್ರಮಗಳು, ಅಂತರಾಷ್ಟ್ರೀಯ ಮಾರುಕಟ್ಟೆಗಳ ಕಡಿಮೆ ಪ್ರಭಾವ ಮತ್ತು ಸೂರ್ಯಕಾಂತಿ ಎಣ್ಣೆಯ ಹೆಚ್ಚಿದ ಲಭ್ಯತೆಯಿಂದಾಗಿ ಬೆಲೆ ಇಳಿಮುಖವಾಗಿದೆ. ಹೊಸ ಎಂಆರ್ಪಿಯೊಂದಿಗೆ ಧಾರಾ ಖಾದ್ಯ ತೈಲವು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೆಚ್ಚಿನ ದರಗಳಿಂದಾಗಿ ಕಳೆದ ಒಂದು ವರ್ಷದಿಂದ ಖಾದ್ಯ ತೈಲ ಬೆಲೆಗಳು ಗಗನಕ್ಕೇರಿದ್ದವು.
ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತವು ವಾರ್ಷಿಕವಾಗಿ ಸುಮಾರು 13 ಮಿಲಿಯನ್ ಟನ್ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. ಖಾದ್ಯ ತೈಲಗಳಿಗೆ ದೇಶದ ಆಮದು ಅವಲಂಬನೆಯೇ ಶೇ. 60ರಷ್ಟಿದೆ.