ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಹೊಲ ಹಸನು ಮಾಡಿಕೊಂಡಿರುವ ರೈತರು ಉಳುಮೆ, ನಾಟಿಮಾಡಲು ತಯಾರಾಗಿದ್ದಾರೆ. ಇದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಹೀಗಾಗಿ ಗೊಬ್ಬರ ಕೇಳಿದ ರೈತನಿಗೆ ಕೇಂದ್ರ ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರಿಗೆ ಕ್ಷೇತ್ರದ ರೈತರೊಬ್ಬರು ಮೊಬೈಲ್ ಕರೆ ಮಾಡಿದ್ದು, ನಮ್ಮ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ. ಇದಕ್ಕೆ ವ್ಯವಸ್ಥೆ ಮಾಡಿ ಎಂದು ಕೇಳಿದ್ದಲ್ಲದೆ, ಜನ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಹೀಗಾದರೆ ನಿಮಗೆ ಮುಂದಿನ ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಭಗವಂತ ಖೂಬಾ, ಗೊಬ್ಬರವನ್ನು ಮನೆಮನೆಗೆ ಹಂಚುವ ಕೆಲಸ ನನ್ನದಲ್ಲ. ಯಾವ ರಾಜ್ಯಕ್ಕೆ ಎಷ್ಟು ಗೊಬ್ಬರ ಕೊಡಬೇಕು ಅಷ್ಟನ್ನು ಈಗಾಗಲೇ ನೀಡಿದ್ದೇವೆ. ನಾನು ಕೇಂದ್ರ ಸಚಿವನಾಗಿದ್ದು, ನಿಮ್ಮ ಎಂಎಲ್ಎ ಇದ್ದಾನೆ ಅಧಿಕಾರಿಗಳಿದ್ದಾರೆ ಅವರ ಬಳಿ ಕೇಳಿಕೋ ಎಂದಿದ್ದಾರೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವರು, ಆತ ರೈತನಲ್ಲ. ರೈತನ ಹೆಸರಿನಲ್ಲಿ ಕರೆ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ.